
ಕೇಪ್‌ಟೌನ್, ಫೆಬ್ರವರಿ 17: ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾ ಡು ಪ್ಲೆಸಿಸ್, ಟೆಸ್ಟ್ ಮತ್ತು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅಂದರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಡು ಪ್ಲೆಸಿಸ್ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ) ಈ ವಿಚಾರವನ್ನು ಸೋಮವಾರ (ಫೆಬ್ರವರಿ 17) ಘೋಷಿಸಿದೆ.
ಡು ಪ್ಲೆಸಿಸ್ ನಾಯಕತ್ವದದಿಂದ ಕೆಳಗಿಳಿಯುತ್ತಿರುವ ವಿಚಾರವನ್ನು ಟ್ವಿಟರ್ ಮೂಲಕ ತಿಳಿಸಿರುವ ಸಿಎಸ್‌ಎ, 'ಈ ಕ್ಷಣದಿಂದಲೇ ಫಾ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ಆಫ್ರಿಕಾ ಟೆಸ್ಟ್ ಮತ್ತು ಟಿ20 ನಾಯಕತ್ವದಿಂದ ಕೆಳಗಿಳಿದಿರುವುದನ್ನು ಘೋಷಿಸಿದ್ದಾರೆ,' ಎಂದು ಬರೆದುಕೊಂಡಿದೆ.
'ಕ್ವಿಂಟನ್ ಡಿ ಕಾಕ್ ಅವರ ಹೊಸ ಉಸ್ತುವಾರಿ ಅಡಿಯಲ್ಲಿ ತಂಡದಲ್ಲಿ ಮುಂದಿನ ಪೀಳಿಗೆಯ ನಾಯಕರು ಹೊರಹೊಮ್ಮಲು ಅನುಕೂಲವಾಗುವಂತೆ ತಾನು ನಾಯಕತ್ವದಿಂದ ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳುವ ಅಗತ್ಯತೆಯಿದೆ ಎಂದು 35ರ ಹರೆಯದ ಡು ಪ್ಲೆಸಿಸ್ ಹೇಳಿದ್ದಾರೆ,' ಎಂದು ಸಿಎಸ್‌ಎ ಟ್ವೀಟ್‌ನಲ್ಲಿ ಹೇಳಿದೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1ರಿಂದ ಡ್ರಾಗೊಳಿಸಿತ್ತು (ಒಂದು ಪಂದ್ಯ ರದ್ದಾಗಿತ್ತು). ಇದೇ ಪ್ರವಾಸ ಸರಣಿಯ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-2ರ ಹಿನ್ನಡೆ ಅನುಭವಿಸಿತ್ತು. ಈ ಎರಡೂ ಸರಣಿಗಳಲ್ಲೂ ಡು ಪ್ಲೆಸಿಸ್ ಪಾಲ್ಗೊಂಡಿರಲಿಲ್ಲ. ಪ್ಲೆಸಿಸ್ ಬದಲಿಗೆ ಆಫ್ರಿಕಾ ತಂಡದ ನಾಯಕತ್ವವನ್ನು ಕ್ವಿಂಟನ್ ಡಿ ಕಾಕ್ ವಹಿಸಿಕೊಂಡಿದ್ದರು.