Champions Trophy: ಉದ್ಘಾಟನಾ ಪಂದ್ಯದಲ್ಲೇ ಪಾಕಿಸ್ತಾನದ ಸ್ಟಾರ್ ಓಪನರ್ ಹೊರಗೆ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆತಿಥೇಯ ಪಾಕಿಸ್ತಾನದ ಸವಾಲನ್ನು ಎದುರಿಸುತ್ತಿದೆ. ಕರಾಚಿಯ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಪಂದ್ಯದ ಎರಡನೇ ಎಸೆತದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಪಾಕಿಸ್ತಾನ ತಂಡದ ಸ್ಟಾರ್ ಓಪನರ್ ಗಾಯಗೊಂಡು ಮೈದಾನ ತೊರೆಯಬೇಕಾಯಿತು.
ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಫಖರ್ ಜಮಾನ್ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದಾರೆ. ಬೌಂಡರಿ ಗೆರೆಗೆ ಹೋಗುತ್ತಿದ್ದ ಚೆಂಡನ್ನು ತಡೆಯಲು ಪ್ರಯತ್ನಿಸುವಾಗ ಫಖರ್ ಗಾಯಗೊಂಡಿದ್ದಾರೆ. ತಕ್ಷಣವೇ ಮೈದಾನದಿಂದ ಹೊರಬಂದು ಜಾಹೀರಾತು ಹೋರ್ಡಿಂಗ್‌ಗಳ ಬಳಿ ಕುಳಿತು ನೋವಿನಿಂದ ನರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಫಖರ್ ಜಮಾನ್ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಅವರು ಮುಂದೆ ಆಡಲು ಸಾಧ್ಯವಾಗದಿದ್ದರೆ, ಇದು ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಬಹುದು. ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಪಾಕಿಸ್ತಾನ ಎದುರಿಸಲಿದೆ.
ಗಾಯಗೊಂಡಿದ್ದೇಗೆ?
ಪಾಕಿಸ್ತಾನ ಪರ ವೇಗಿ ಶಾಹೀನ್ ಶಾ ಅಫ್ರಿದಿ ಮೊದಲ ಓವರ್‌ನ ಜವಾಬ್ದಾರಿಯನ್ನು ವಹಿಸಿಕೊಂಡು ನ್ಯೂಜಿಲೆಂಡ್‌ನ ವಿಲ್ ಯಂಗ್ ವಿರುದ್ಧ ಲೈನ್-ಲೆಂಗ್ತ್‌ನಲ್ಲಿ ತಮ್ಮ ಮೊದಲ ಚೆಂಡನ್ನು ಎಸೆದರು. ನಂತರ ಶಾಹೀನ್ ಎಸೆದ ಎರಡನೇ ಎಸೆತದಲ್ಲಿ ನ್ಯೂಜಿಲೆಂಡ್ ವಿಲ್ ಯಂಗ್ ಅದ್ಭುತ ಕವರ್ ಡ್ರೈವ್ ಆಡಿದರು. ಚೆಂಡು ಬೌಂಡರಿ ಗೆರೆಗೆ ಹೋಗುವುದನ್ನು ತಡೆಯಲು ಫಖರ್ ಹಿಂದಕ್ಕೆ ಓಡಿ ಹೋದರು. ಅವರು ಬೌಂಡರಿಯನ್ನು ಉಳಿಸುವಾಗ ಗಾಯಗೊಂಡರು. ಮೈದಾನದಲ್ಲೇ ಅವರು ನೋವಿನಿಂದ ಬಳಲುತ್ತಿದರು. ಇದಾದ ಕೂಡಲೇ, ಫಖರ್ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಅವರ ಸ್ಥಾನದಲ್ಲಿ ಕಮ್ರಾನ್ ಗುಲಾಮ್ ಅವರನ್ನು ಫೀಲ್ಡಿಂಗ್‌ಗೆ ಕರೆಸಲಾಯಿತು. ಡ್ರೆಸ್ಸಿಂಗ್ ರೂಮ್‌ಗೆ ಹೋಗುವ ಮೊದಲು ಫಖರ್ ಜಮಾನ್ ಫಿಸಿಯೋ ಜೊತೆ ಬೆನ್ನಿನ ಎಡಭಾಗಕ್ಕೆ ಬೆರಳು ತೋರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಉಭಯ ತಂಡಗಳ ಪ್ಲೇಯಿಂಗ್-11
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ಸಿ), ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ವಿಲಿಯಂ ಒ'ರೂರ್ಕ್.
ಪಾಕಿಸ್ತಾನ: ಫಖರ್ ಜಮಾನ್, ಬಾಬರ್ ಅಜಮ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್/ನಾಯಕ), ಸಲ್ಮಾನ್ ಆಘಾ, ತಯ್ಯಬ್ ತಾಹಿರ್, ಖುಶ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್, ಅಬ್ರಾರ್ ಅಹ್ಮದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications