ವಿಶ್ವಕಪ್ ನಲ್ಲಿ ತ್ವರಿತಗತಿ 100, 4ನೇ ಸ್ಥಾನಕ್ಕೇರಿದ ಇಯಾನ್ ಮಾರ್ಗನ್

ಲಂಡನ್, ಜೂನ್ 18: ಕ್ರಿಕೆಟ್ ವಿಶ್ವಕಪ್ 2019ರಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರು ಭರ್ಜರಿ ಆಟ ಪ್ರದರ್ಶಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಎಮಿರೇಟ್ಸ್ ಮೈದಾನದಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ ರನ್ ಹೊಳೆ ಹರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಭರ್ಜರಿ ಆರಂಭ ಪಡೆದುಕೊಂಡಿತು. ಜಾಸನ್ ರಾಯ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಜೇಮ್ಸ್ ವಿನ್ಸ್ 26ರನ್ ಗಳಿಸಿ ಔಟಾದರೆ, ಜಾನಿ ಬೈರ್ಸ್ಟೋ 90ರನ್ ಚೆಚ್ಚಿದರು, ಜೋ ರೂಟ್ 88ರನ್ ಗಳಿಸಿ ಔಟಾದರು.
ನಾಯಕ ಇಯಾನ್ ಮಾರ್ಗನ್ ಅವರು 71 ಎಸೆತಗಳಲ್ಲಿ 148ರನ್ (4 ಬೌಂಡರಿ, 17 ಸಿಕ್ಸರ್) ಸಿಡಿಸಿದರು. ಈ ಮೂಲಕ ತ್ವರಿತಗತಿಯಲ್ಲಿ ನೂರು ರನ್ ಗಡಿ ದಾಟಿದ ದಾಂಡಿಗರ ಪಟ್ಟಿಗೆ ಸೇರ್ಪಡೆಯಾದರು. ಮಾರ್ಗನ್ ಸಿಡಿಸಿದ 17 ಸಿಕ್ಸರ್ ಕೂಡಾ ವಿಶ್ವಕಪ್ ಹಾಗೂ ಒಡಿಐ ಇನ್ನಿಂಗ್ಸ್ ನಲ್ಲಿ ಅತ್ಯಧಿಕ ಸಿಕ್ಸರ್ ಗಳಿಸಿದ ದಾಖಲೆಯಾಗಿದೆ.
ವಿಶ್ವಕಪ್ ಟೂರ್ನಮೆಂಟ್ ಗಳಲ್ಲಿ ಅತ್ಯಂತ ವೇಗವಾಗಿ ಶತಕ ಗಳಿಸಿದ ಸಾಧನೆ ಐರ್ಲೆಂಡ್ ಆಟಗಾರ ಕೆವಿನ್ ಓ ಬ್ರಿಯಾನ್ ಹೆಸರಿನಲ್ಲಿದೆ. ಕ್ರಿಕೆಟ್ ಜನಕ ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ 2011ರ ವಿಶ್ವಕಪ್ ಪಂದ್ಯಾವಳಿಯಲ್ಲಿ 50 ಎಸೆತಗಳಲ್ಲಿ 100ರನ್ ಗಡಿ ದಾಟಿದ್ದರು.
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಹೊಡಿ ಬಡಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಎರಡನೇ ಸ್ಥಾನದಲ್ಲಿದ್ದಾರೆ. 2015ರ ವಿಶ್ವಕಪ್ ನಲ್ಲಿ ಸಿಡ್ನಿಯಲ್ಲಿ ಶ್ರೀಲಂಕಾ ವಿರುದ್ಧ 51 ಎಸೆತಗಳಲ್ಲಿ ನೂರು ರನ್ ಕಲೆ ಹಾಕಿದ್ದರು. ಮೂರನೇ ಸ್ಥಾನದಲ್ಲಿ ದಕ್ಷಿಣ ಅಫ್ರಿಕಾದ ಎಬಿ ಡಿವಿಲಿಯರ್ಸ್ ಇದ್ದಾರೆ. ಎಬಿಡಿ ಕೂಡಾ 2015ರಲ್ಲಿ ಈ ಸಾಧನೆ ಮಾಡಿದ್ದು, ಎಸ್ ಸಿ ಜಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 52 ಎಸೆತಗಳಲ್ಲಿ ನೂರು ಗಡಿ ದಾಟಿದ್ದರು.
57 ಎಸೆತಗಳಲ್ಲಿ 100ರನ್ ಗಳಿಸಿದ ಇಯಾನ್ ಮಾರ್ಗನ್ ಅವರು ನಾಲ್ಕನೇ ಸ್ಥಾನಕ್ಕೇರಿದ್ದಾರೆ. ನಾಲ್ಕನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಅವರು ಐದನೆ ಸ್ಥಾನಕ್ಕೆ ಕುಸಿದಿದ್ದಾರೆ. ಹೇಡನ್ ಅವರು 2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 66 ಎಸೆತಗಳಲ್ಲಿ ನೂರು ರನ್ ಗಳಿಸಿದ್ದರು.ಆರನೇ ಸ್ಥಾನದಲ್ಲಿ ಕೆನಡಾದ ಜಾನ್ ಡೇವಿಡ್ಸನ್ ಇದ್ದಾರೆ. 2003ರಲ್ಲಿ ಸೆಂಚುರಿಯನ್ ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 67 ಎಸೆತಗಳಲ್ಲಿ ಶತಕ ಗಳಿಸಿದ್ದರು.
ಭಾರತದ ಪರ ವಿಶ್ವಕಪ್ ನಲ್ಲಿ ತ್ವರಿತಗತಿ ಶತಕ ಬಾರಿಸಿದ್ದು ಮಾಜಿ ನಾಯಕ ಕಪಿಲ್ ದೇವ್. 1983ರ ವಿಶ್ವಕಪ್ ನಲ್ಲಿ ಟನ್ ಬ್ರಿಜ್ ವೇಲ್ಸ್ ನಲ್ಲಿ ಜಿಂಬಾಬ್ವೆ ವಿರುದ್ಧ 7ನೇ ಕ್ರಮಾಂಕದಲ್ಲಿ ಬಂದು 72 ಎಸೆತಗಳಲ್ಲಿ ನೂರರ ಗಡಿ ದಾಟಿದ್ದರು. 17 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಕ್ಕೆ ಜಯ ತಂದಿತ್ತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications