
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ಸಂದರ್ಭದಲ್ಲಿ ಯುವರಾಜ್ ಸಿಂಗ್ ಜಾತಿನಿಂದನೆ ಪದ ಬಳಸಿದ್ದರು ಎಂಬ ಬಗ್ಗೆ ಆರೋಪಗಳು ಕೇಳಿ ಬಂದಿದ್ದು ಈ ವಿಚಾರವಾಗಿ ಈಗ ಎಫ್‌ಐಆರ್ ದಾಖಲಾಗಿದೆ.
2020ರಲ್ಲಿ ಯುವರಾಜ್ ಸಿಂಗ್ ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಜೊತೆಗೆ ಲೈವ್‌ಗೆ ಬಂದ ಸಂದರ್ಭದಲ್ಲಿ ಯುಜುವೇಂದ್ರ ಚಾಹಲ್‌ಗೆ ತಮಾಷೆ ಮಾತನಾಡುತ್ತಾ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು. ಈ ಮಾತುಗಳು ಜಾತಿನಿಂದಕ ಎಂದು ಆರೋಪಿಸಲಾಗಿದ್ದು ಹರ್ಯಾಣ ಪೊಲೀಸರು ಯುವರಾಜ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಹರ್ಯಾಣದ ಹಿಸಾರ್‌ನ ಹನ್ಸಿ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 14ರಂದು ಭಾನುವಾರ ಯುವರಾಜ್ ಸಿಂಗ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3 (1) (ಆರ್) ಮತ್ತು 3 (1) (ಎಸ್) ಜೊತೆಗೆ ಐಸಿಪಿ ಸೆಕ್ಷನ್ 153, 153A, 295 ಹಾಗೂ 505ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಜೂನ್ ತಿಂಗಳಿನಲ್ಲಿ ಯುವರಾಜ್ ಸಿಂಗ್ ಮಾತು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಯುವರಾಜ್ ಸಿಂಗ್ ಈ ಬಗ್ಗೆ ಕ್ಷಮೆಯಾಚನೆಯನ್ನೂ ಮಾಡಿದ್ದರು. ಇದು ಉದ್ಧೇಶಪೂರ್ವಕವಾಗಿ ಅಲ್ಲದೆ ಮಾಡಿದ ತಪ್ಪಾಗಿದೆ ಎಂದು ಯುವಿ ಕ್ಷಮೆ ಕೇಳಿದ್ದರು. ಈ ಘಟನೆ ಬಗ್ಗೆ ಈಗ ಎಫ್‌ಐಆರ್ ದಾಖಲಾಗಿದೆ.