ಭಾರತ ಕ್ರಿಕೆಟ್ ತಂಡ ಸದ್ಯ ಶ್ರೀಲಂಕಾ ಪ್ರವಾಸವನ್ನು ಪೂರ್ಣಗೊಳಿಸಿದೆ. ಈಗ ಟೀಮ್ ಇಂಡಿಯಾ ತವರಿನಲ್ಲಿ ನಡೆಯಲಿರುವ ಬಾಂಗ್ಲಾ ಸರಣಿಯನ್ನು ಎದುರು ನೋಡುತ್ತಿದೆ. ಟೀಮ್ ಇಂಡಿಯಾ ಆಟಗಾರರು ಸದ್ಯ ಐದು ವಾರ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಬಾಂಗ್ಲಾ ವಿರುದ್ಧದ ಸರಣಿ ಅರಂಭವಾಗಲಿದೆ.
ಟೀಮ್ ಇಂಡಿಯಾ ಈ ವರ್ಷ ತನ್ನ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ. ಇತ್ತೀಚೆಗೆ ಭಾರತ ತಂಡ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. ಅದೇ ಸಮಯದಲ್ಲಿ, ಈ ಸರಣಿಯಲ್ಲಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಇಲ್ಲದ ದಾಖಲೆಗೆ ಹೆಸರು ನಮೂದಿಸಿದ್ದಾರೆ.

38 ವರ್ಷಗಳ ಹಿಂದೆ ಟೀಮ್ ಇಂಡಿಯಾ ಆಟಗಾರರು ಏಕದಿನ ಕ್ರಿಕೆಟ್‌ನಲ್ಲಿ ಶತಕಗಳಿಸದೆ ವರ್ಷವನ್ನು ಅಂತ್ಯಗೊಳಿಸಿದ್ದರು. ಈ ವರ್ಷವೂ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಶತಕ ಗಳಿಸಲು ಸಾಧ್ಯವಾಗಿಲ್ಲ. ಕಳೆದ 38 ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇಡೀ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಶತಕ ಗಳಿಸಲು ಸಾಧ್ಯವಾಗದಿರುವುದು ಇದೇ ಮೊದಲು.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 64 ರನ್ ಸಿಡಿಸಿದ್ದು ದೊಡ್ಡ ಇನ್ನಿಂಗ್ಸ್ ಆಗಿತ್ತು. ಶ್ರೀಲಂಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಎರಡನೇ ಪಂದ್ಯದಲ್ಲಿ 64 ರನ್ ಬಾರಿಸಿದ್ದರು. ಇದೇ ಈ ವರ್ಷ ಟೀಮ್ ಇಂಡಿಯಾ ಆಟಗಾರ ದಾಖಲಿಸಿದ ದೊಡ್ಡ ಸ್ಕೋರ್ ಆಗಿತ್ತು. ಇನ್ನು ಇದು ವರ್ಷದ ಎಂಟನೇ ತಿಂಗಳು ಇನ್ನು ನಾಲ್ಕು ತಿಂಗಳು ಬಾಕಿ ಇದ್ದು, ಇನ್ನು ಒಂದು ಶತಕ ಬಾರಿಸುವುದಿಲ್ಲವೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಬಹುದು.

ಹೌದು.. ಈ ವರ್ಷ ಮುಗಿಯಲು ಇನ್ನು ನಾಲ್ಕು ತಿಂಗಳು ಇವೆ. ಆದರೆ ಭಾರತ ಈ ನಾಲ್ಕು ತಿಂಗಳಲ್ಲಿ ಯಾವುದೇ ಏಕದಿನ ಪಂದ್ಯವನ್ನು ಆಡುತ್ತಿಲ್ಲ. ಇನ್ನು ಈ ವರ್ಷ ಟೀಂ ಇಂಡಿಯಾ ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನಷ್ಟೇ ಆಡಲಿದೆ.
ಇದಕ್ಕೂ ಮೊದಲು ಭಾರತ ಕ್ರಿಕೆಟ್ ತಂಡ 1985ರಲ್ಲಿ ಸಹ ಇದೇ ರೀತಿಯ ದಾಖಲೆ ತನ್ನದಾಗಿಸಿಕೊಂಡಿತ್ತು. ಈ ವೇಳೆ ಆಗಿನ ನಾಯಕ ಮೊಹಮ್ಮದ್ ಅಜರುದ್ಧಿನ್ 93 ರನ್‌ಗಳ ದೊಡ್ಡ ಇನ್ನಿಂಗ್ಸ್ ಕಟ್ಟಿದ್ದರು. ಕುತೂಹಲಕಾರಿ ಅಂಶ ಎಂದರೆ ಆ ವರ್ಷವೂ ನಾಯಕನೇ ಅತಿ ದೊಡ್ಡ ಇನ್ನಿಂಗ್ಸ್ ಕಟ್ಟಿದ ಕೀರ್ತಿಯನ್ನು ಹೊಂದಿದ್ದನು.
ಟೀಮ್ ಇಂಡಿಯಾ ಈ ವರ್ಷ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳನ್ನು ಆಡಿದ್ದು, ಬಿಟ್ಟರೆ ಬೇರೆ ಸರಣಿಗಳನ್ನು ಆಡಿಲ್ಲ. ಟೀಮ್ ಇಂಡಿಯಾ ಮುಂದಿನ ವರ್ಷ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಈ ವರ್ಷ ಟೀಮ್ ಇಂಡಿಯಾ ಇನ್ನು ಯಾವ ಏಕದಿನ ಪಂದ್ಯಗಳನ್ನು ಆಡುತ್ತಿಲ್ಲ.