ಜುಲೈ 13 ಶನಿವಾರ, ಕನ್ನಡಿಗ ರಾಹುಲ್ ದ್ರಾವಿಡ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಶಾಂತ ಸ್ವಭಾವ ಮತ್ತು ಸಜ್ಜನಿಕೆಯ ಆಟಗಾರರನಾಗಿ ಹೆಸರುವಾಸಿಯಾಗಿದ್ದಾರೆ. ರಾಹುಲ್ ದ್ರಾವಿಡ್ ಇದುವರೆಗೆ ಯಾವುದೇ ವಿವಾದದಲ್ಲಿ ಭಾಗಿಯಾಗಿದ್ದಾರೋ ಇಲ್ಲವೋ ಎಂಬುದು ಬಹುತೇಕ ಕ್ರಿಕೆಟ್ ಅಭಿಮಾನಿಗಳಿಗೆ ನೆನಪಿಲ್ಲ.
ಆದರೆ ರಾಹುಲ್ ದ್ರಾವಿಡ್ ಅವರು ಕ್ರಿಕೆಟ್ ಮೈದಾನದಲ್ಲಿ ಕೆಲವು ವಿವಾದಗಳಲ್ಲಿ ಭಾಗಿಯಾಗಿದ್ದಾರೆ. ಅದರ ಬಗ್ಗೆ ಕೆಲವರಿಗೆ ತಿಳಿದಿದೆ. ರಾಹುಲ್ ದ್ರಾವಿಡ್ ಅವರ ವೃತ್ತಿಜೀವನಕ್ಕೆ ಸಂಬಂಧಿಸಿದ 5 ದೊಡ್ಡ ವಿವಾದಗಳ ಬಗ್ಗೆ ಇಲ್ಲಿದೆ.

ಮಾಜಿ ಆಸ್ಟ್ರೇಲಿಯಾ ಬ್ಯಾಟರ್ ಗ್ರೆಗ್ ಚಾಪೆಲ್ ಟೀಮ್ ಇಂಡಿಯಾದ ಕೋಚ್ ಆಗಿದ್ದಾಗ, ಅಂದಿನ ನಾಯಕ ಸೌರವ್ ಗಂಗೂಲಿ ಜೊತೆಗಿನ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬಂದವು. ಪರಿಣಾಮ ಗ್ರೆಗ್ ಚಾಪೆಲ್ ತನ್ನ ಕೋಚಿಂಗ್ ಶಕ್ತಿಯನ್ನು ಬಳಸಿಕೊಂಡು ಸೌರವ್ ಗಂಗೂಲಿಯನ್ನು ತಂಡದಿಂದ ಹೊರಹಾಕಿದರು.
ವರದಿಗಳ ಪ್ರಕಾರ, ಸೌರವ್ ಗಂಗೂಲಿಯೊಂದಿಗೆ ಗ್ರೆಗ್ ಚಾಪೆಲ್ ಅವರ ವಿವಾದ ನಡೆಯುತ್ತಿರುವಾಗ, ರಾಹುಲ್ ದ್ರಾವಿಡ್ ಮೌನವನ್ನು ಕಾಯ್ದುಕೊಳ್ಳುತ್ತಿದ್ದರು ಮತ್ತು ಚಾಪೆಲ್ ಅವರ ನಿರ್ಧಾರಗಳನ್ನು ಒಪ್ಪುತ್ತಿದ್ದರು.
ಈ ಬಗ್ಗೆ ಸೌರವ್ ಗಂಗೂಲಿ ಕೂಡ ಹೇಳಿಕೆ ನೀಡಿದ್ದು, ಗ್ರೆಗ್ ಚಾಪೆಲ್ ಅವರ ನಿರ್ಧಾರಗಳ ವಿರುದ್ಧ ಮಾತನಾಡದೆ ರಾಹುಲ್ ದ್ರಾವಿಡ್ ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ. ನಂತರ, 2007ರ ವಿಶ್ವಕಪ್‌ನಲ್ಲಿನ ಸೋಲಿನ ನಂತರ, ಬಿಸಿಸಿಐ ಗ್ರೆಗ್ ಚಾಪೆಲ್ ಅವರನ್ನು ಭಾರತ ತಂಡದ ಕೋಚ್ ಹುದ್ದೆಯಿಂದ ತೆಗೆದುಹಾಕಿತ್ತು.
ರಾಹುಲ್ ದ್ರಾವಿಡ್ ತನ್ನ 16 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಎಂದಿಗೂ ತಾಳ್ಮೆ ಕಳೆದುಕೊಂಡದ್ದನ್ನು ಬಹುತೇಕ ಮಂದಿ ನೋಡಿರಲಿಲ್ಲ. ಆದರೆ 2004ರಲ್ಲಿ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ದ್ರಾವಿಡ್ ತಮ್ಮ ತಾಳ್ಮೆ ಕಳೆದುಕೊಂಡರು.
ವಾಸ್ತವವಾಗಿ, ರಾಹುಲ್ ದ್ರಾವಿಡ್ ರನ್ ತೆಗೆದುಕೊಳ್ಳುತ್ತಿದ್ದಾಗ, ಅವರು ಶೋಯೆಬ್ ಅಖ್ತರ್‌ಗೆ ಡಿಕ್ಕಿ ಹೊಡೆದರು. ಇದಾದ ಬಳಿಕ ಅಖ್ತರ್, ದ್ರಾವಿಡ್‌ಗೆ ಏನೋ ಹೇಳುತ್ತಾರೆ. ಆಗ ದ್ರಾವಿಡ್ ತಮ್ಮ ಕೋಪವನ್ನು ತೋರಿಸಿ ಶೋಯೆಬ್ ಅಖ್ತರ್ ಜೊತೆ ವಾಗ್ವಾದ ನಡೆಸಿದ್ದರು.
ಈ ವೇಳೆ ಅಂಪೈರ್ ಹಾಗೂ ಇತರ ಆಟಗಾರರು ಸಮಾಧಾನಪಡಿಸಿದರು. ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಸೋಲು ಅನುಭವಿಸಬೇಕಾಯಿತು. ಭಾರತ ನೀಡಿದ 201 ರನ್‌ಗಳ ಗುರಿಯನ್ನು ಪಾಕಿಸ್ತಾನ 49.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಸಾಧಿಸಿತು.
2004ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ತ್ರಿಶತಕ ಸಿಡಿಸಿದ ಬಳಿಕವೇ ನಾಯಕ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಆಗ ಸಚಿನ್ ತೆಂಡೂಲ್ಕರ್ 194 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು ಮತ್ತು ದ್ವಿಶತಕ ಗಳಿಸಲು ಕೇವಲ 6 ರನ್‌ಗಳ ಅಗತ್ಯವಿತ್ತು.
ಆದರೆ ವೀರೇಂದ್ರ ಸೆಹ್ವಾಗ್ ತ್ರಿಶತಕದ ನಂತರ ದ್ರಾವಿಡ್ ಭಾರತದ ಮೊದಲ ಇನ್ನಿಂಗ್ಸ್ ಅನ್ನು 5 ವಿಕೆಟ್‌ಗೆ 675 ರನ್‌ಗೆ ಡಿಕ್ಲೇರ್ ಮಾಡಿಕೊಂಡರು. ಇದನ್ನು ನೋಡಿದ ಸಚಿನ್ ತೆಂಡೂಲ್ಕರ್ ಕೂಡ ಅಚ್ಚರಿಗೊಂಡಿದ್ದರು.
ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 52 ರನ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸೆಹ್ವಾಗ್ 309 ರನ್ ಗಳ ಇನಿಂಗ್ಸ್ ಆಡಿದ್ದರು. ಪಂದ್ಯದ ನಂತರ ರಾಹುಲ್ ದ್ರಾವಿಡ್ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.
ಕ್ರಿಕೆಟ್‌ನಲ್ಲಿ ಚೆಂಡಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳೂ ಇವೆ. ಈ ಕಾನೂನುಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾಡಿದೆ. ಈ ಕಾನೂನಿನ ಪ್ರಕಾರ, ಯಾವುದೇ ಆಟಗಾರನು ಚೆಂಡಿನ ಗಾತ್ರ ಮತ್ತು ಆಕಾರವನ್ನು ಹಾಳುಮಾಡುವಂತಿಲ್ಲ. ಅಂತಹ ಯಾವುದೇ ಕೃತ್ಯ ನಡೆದರೆ, ಅದನ್ನು ಬಾಲ್ ಟ್ಯಾಂಪರಿಂಗ್ ಎಂದು ಕರೆಯಲಾಗುತ್ತದೆ.
2004ರಲ್ಲಿ, ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಸಂದರ್ಭದಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಅವರು ಚೆಂಡಿನ ಮೇಲೆ ಜೆಲ್ಲಿಯನ್ನು ಅನ್ವಯಿಸಿದರು ಎಂದು ಆರೋಪಿಸಿಲಾಗುತ್ತು. ಈ ವೇಳೆ ಮ್ಯಾಚ್ ರೆಫರಿ ಕ್ಲೈವ್ ಲಾಯ್ಡ್ ದಂಡ ವಿಧಿಸಿದ್ದರು.
ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಕೂಡ 106 ಎಸೆತಗಳಲ್ಲಿ 84 ರನ್ ಸಿಡಿಸಿದ್ದರು. ಈ ಇನ್ನಿಂಗ್ಸ್ ನೆರವಿನಿಂದ ಭಾರತ 255 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಜಿಂಬಾಬ್ವೆ ತಂಡ ಕೇವಲ 231 ರನ್ ಗಳಿಸಿ ಟೀಮ್ ಇಂಡಿಯಾ ಎದುರು ಸೋಲು ಕಂಡಿತ್ತು.
ಐಪಿಎಲ್ 2013ರ ಆವೃತ್ತಿಯಲ್ಲಿ ಭಾರತೀಯ ವೇಗದ ಬೌಲರ್‌ಗಳಾದ ಎಸ್ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಇದರಿಂದಾಗಿ ಈ ಮೂವರು ಆಟಗಾರರು ಕೆಲವು ದಿನಗಳ ಕಾಲ ಜೈಲಿನಲ್ಲಿಯೂ ಕಳೆಯಬೇಕಾಯಿತು.
2013 ರ ಐಪಿಎಲ್ ವೇಳೆ ಎಸ್ ಶ್ರೀಶಾಂತ್ ಜೊತೆಗೆ ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ಹೋಟೆಲ್‌ನಿಂದ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಮೂವರ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ದಾಖಲಿಸಲಾಗಿತ್ತು.
ಬಳಿಕ ಮೂವರೂ ಕೆಲಕಾಲ ಜೈಲಿನಲ್ಲಿದ್ದರು. ಬಿಸಿಸಿಐ ಈ ಮೂವರು ಆಟಗಾರರನ್ನು ಕ್ರಿಕೆಟ್‌ನಿಂದ ಆಜೀವ ನಿಷೇಧಿಸಿತ್ತು. ಈ ಸಮಯದಲ್ಲಿ, ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು. ಹಾಗಾಗಿ ಸ್ವಲ್ಪ ಸಮಯದವರೆಗೆ ದ್ರಾವಿಡ್ ಹೆಸರು ಕೂಡ ಈ ವಿವಾದಗಳಲ್ಲಿ ಸಿಲುಕಿಕೊಂಡಿತ್ತು.