ಐಪಿಎಲ್ 2025 ರ ಸೀಸನ್ ಅದ್ಧೂರಿಯಾಗಿ ನಡೆಯುತ್ತಿದೆ. ಈ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ವಿಶ್ವ ಸ್ಟಾರ್ ಆಟಗಾರರು ಆಡುತ್ತಿದ್ದಾರೆ. ಟೀಮ್ ಇಂಡಿಯಾ ಪರ ಮಿಂಚಿದ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಪ್ರದರ್ಶನ ಉತ್ತಮವಾಗಿದೆ. ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡವು ಯಾವುದೇ ಸರಣಿಯನ್ನು ಸೋತಿಲ್ಲ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಯಂಗ್ ಇಂಡಿಯಾದ ಪ್ರದರ್ಶನ ಅದ್ಭುತವಾಗಿದೆ. ಐಪಿಎಲ್ 2025 ರಲ್ಲಿ ಆಡುತ್ತಿರುವ ಭಾರತ ತಂಡದ ಹಲವು ಯುವ ಆಟಗಾರರು ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ಐಪಿಎಲ್ 2024 ರಲ್ಲಿ ಈ ಆಟಗಾರರು ತಮ್ಮ ಅಮೋಘ ಪ್ರದರ್ಶನದ ಮೂಲಕ ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನೂ ಪಡೆದಿದ್ದರು. ಆದರೆ, ಈ ಬಾರಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅಂತಹ ಐವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಐಪಿಎಲ್ 2025 ರಲ್ಲಿ ತುಂಬಾ ದುಬಾರಿಯಾಗಿದ್ದಾರೆ. ಇಲ್ಲಿಯವರೆಗೆ 4 ಪಂದ್ಯಗಳಲ್ಲಿ ಸುಮಾರು 12 ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಅವರು ಕೇವಲ ಮೂರು ವಿಕೆಟ್ ಪಡೆದಿದ್ದಾರೆ. ಕಳೆದ ಬಾರಿ ಅವರು ತಮ್ಮ ಪರಿಣಾಮಕಾರಿ ಬೌಲಿಂಗ್ ಮೂಲಕ ಟೂರ್ನಿಯಲ್ಲಿ ಮಿಂಚಿದ್ದರು. ಭಾರತ ಪರ 42 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ರವಿ ಬಿಷ್ಣೋಯ್ ಆಡಿದ್ದಾರೆ.
ಸ್ಟಾರ್ ಯುವ ವೇಗದ ಬೌಲರ್ ಹರ್ಷಿತ್ ರಾಣಾ ಭಾರತ ಪರ ಮೂರು ಮಾದರಿಗಳಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಅವರು ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಭಾಗವಾಗಿದ್ದರು. ಆದರೆ, ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ ಕೇವಲ 3 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ನಾಲ್ಕು ಪಂದ್ಯಗಳಲ್ಲಿ, ರಾಣಾ 9.25 ರ ಎಕಾನಮಿ ದರದಲ್ಲಿ ರನ್ ನೀಡಿದ್ದಾರೆ. ಕಳೆದ ಬಾರಿ ಕೆಕೆಆರ್ ನೀಡಿದ ಪ್ರದರ್ಶನವನ್ನು ನೀಡುವಲ್ಲಿ ಹರ್ಷಿತ್ ರಾಣಾ ವಿಫಲವಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿಎಲ್ 2025 ರಲ್ಲಿ ಶಿವಂ ದುಬೆ ಆಸರೆಯಾಗುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಕಳಪೆಯಾಗಿದೆ. ಶಿವಂ ದುವೆ 2024 ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಇದ್ದರು. ಐಪಿಎಲ್ 2025 ರಲ್ಲಿ ದುಬೆ ಇದುವರೆಗೆ 4 ಪಂದ್ಯಗಳಲ್ಲಿ 16 ಸರಾಸರಿ ಮತ್ತು 136 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 64 ರನ್ ಗಳಿಸಿದ್ದಾರೆ.
ಐಪಿಎಲ್ 2024ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಯುವ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅಬ್ಬರಿಸಿದ್ದರು. ಈ ಪ್ರದರ್ಶನದಿಂದಾಗಿ ಅವರಿಗೆ ಟೀಮ್ ಇಂಡಿಯಾದಲ್ಲಿಯೂ ಆಡುವ ಅವಕಾಶ ಸಿಕ್ಕಿತ್ತು. ಅಲ್ಲಿಯೂ ಅವರ ಪ್ರದರ್ಶನ ಉತ್ತಮವಾಗಿತ್ತು. ಆದರೆ ಈಗ ಅವರು ಐಪಿಎಲ್ 2025 ರಲ್ಲಿ ಮಂಕಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು ಬಾರಿಸಿದ್ದ ಅಭಿಷೇಕ್ ಈ ಬಾರಿ 5 ಪಂದ್ಯಗಳಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ.
ಮುಂಬೈ ಇಂಡಿಯನ್ಸ್ ತಂಡದ ಭರವಸೆ ಬ್ಯಾಟರ್ ತಿಲಕ್ ವರ್ಮಾ ಐಪಿಎಲ್ 2025 ರಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತಿಲಕ್ ವರ್ಮಾ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಇದಕ್ಕೂ ಮುನ್ನ ನಡೆದ 4 ಪಂದ್ಯಗಳಲ್ಲಿ 95 ರನ್ ಗಳಿಸಿದ್ದರು.