ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಗೆಲುವಿನ ಆಸೆಯೊಂದಿಗೆ ಪ್ರವಾಸ ಬೆಳೆಸಿದ್ದ ಟೀಮ್ ಇಂಡಿಯಾದ ಆಸೆ ಈ ಬಾರಿಯೂ ಕನಸಾಗಿಯೇ ಉಳಿದಿದೆ. ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ನೀಡಿದ ಪ್ರದರ್ಶನವನ್ನೇ ಟೀಮ್ ಇಂಡಿಯಾ ಬ್ಯಾಟರ್ ಎರಡನೇ ಇನ್ನಿಂಗ್ಸ್‌ನಲ್ಲೂ ಮುಂದುವರೆಸಿದ್ದಾರೆ. ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಹೊರತು ಪಡಿಸಿದರೆ, ಉಳಿದ ಎಲ್ಲ ಬ್ಯಾಟರ್‌ಗಳು ಒಂದಕ್ಕಿಯಲ್ಲಿ ಆಟ ಮುಗಿಸಿದರು.

ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ಸೋಲು ಮುಖ್ಯವಾದ ಐದು ಕಾರಣಗಳು ಇಲ್ಲಿವೆ.
ಟೀಮ್ ಇಂಡಿಯಾದ ಭರವಸೆಯ ಟಾಪ್ ಆರ್ಡರ್ ಬ್ಯಾಟರ್‌ಗಳು ಮೊದಲ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ ಜೊತೆಯಾಟದ ಕಾಣಿಕೆ ನೀಡದಿರುವುದೇ ಮುಖ್ಯ ಕಾರಣ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಬ್ಬರಿಸಿದ್ದ ಯಶಸ್ವಿ ಜೈಸ್ವಾಲ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕಂಪ್ಲೀಟ್ ಫ್ಲಾಫ್ ಶೋ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 17 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ರನ್ ಬಾರಿಸಿ ನಿರಾಸೆ ಅನುಭವಿಸಿದ್ದಾರೆ. ಇನ್ನು ನಾಯಕ ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್‌ನಲ್ಲಿ 5 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದರು.

ಟಾಪ್ ಆರ್ಡರ್ ಬ್ಯಾಟರ್‌ಗಳು ಫೇಲ್ ಆದರೆ, ಜವಾಬ್ದಾರಿಯನ್ನು ಹೊತ್ತು ಕೊಂಡು ಬ್ಯಾಟ್ ಮಾಡಬೇಕಿದ್ದ ಮಿಡ್ಲ್ ಆರ್ಡರ್ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳ ಎದುರು ಹೆದರುತ್ತ ಬ್ಯಾಟ್ ಮಾಡಿದಂತೆ ಕಂಡು ಬಂದಿತು. ಈ ವರ್ಷದ ಸ್ಟಾರ್ ಬ್ಯಾಟರ್ ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ತಮ್ಮ ಜವಾಬ್ದಾರಿಯನ್ನು ಮರೆತರು.
ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 82 ಎಸೆತಗಳನ್ನು ಎದುರಿಸಿ 12 ಬೌಂಡರಿ, 1 ಸಿಕ್ಸರ್ ಸಹಾಯದಿಂದ 76 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇವರಿಗೆ ಯಾವೊಬ್ಬ ಬ್ಯಾಟರ್ ಸಾಥ್ ನೀಡಲಿಲ್ಲ.
ಮೊದಲ ಇನ್ನಿಂಗ್ಸ್‌ನಲ್ಲಿ ಕೆ.ಎಲ್ ರಾಹುಲ್ ಮಾಡಿದ ರೀತಿ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಏಕಾಂಗಿ ಹೋರಾಟ ನಡೆಸಿದರು.

ಟೀಮ್ ಇಂಡಿಯಾದ ಆಲ್‌ರೌಂಡರ್ಸ್ ಕೋಟಾದಲ್ಲಿ ಸ್ಥಾನ ಪಡೆದಿದ್ದ ಶಾರ್ದೂಲ್ ಠಾಕೂರ್ ಹಾಗೂ ಆರ್.ಅಶ್ವಿನ್ ತಂಡಕ್ಕೆ ಹೊರೆಯಾದರು. ಇವರಿಬ್ಬರೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡದೆ ಭಾರವಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 8, ಶಾರ್ದೂಲ್ 24 ರನ್ ಬಾರಿಸಿದರು. ಇನ್ನು ಇಬ್ಬರೂ ತಲಾ ಒಂದು ವಿಕೆಟ್ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ.
ಶಾರ್ದೂಲ್ ಅತಿ ಹೆಚ್ಚು ರನ್ ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದಾರೆ. ಇವರು 19 ಓವರ್ ಬೌಲ್ ಮಾಡಿ 5.31ರ ಸರಾಸರಿಯಲ್ಲಿ 101 ರನ್ ನೀಡಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ವೇಗಿಗಳಾದ ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಕಮಾಲ್ ಪ್ರದರ್ಶನ ನೀಡಲಿಲ್ಲ. ಬುಮ್ರಾ 4 ವಿಕೆಟ್ ಕಬಳಿಸಿದರೂ, ಸಹ ಅವರ ಕ್ಷಮತೆಗೆ ತಕ್ಕ ಪ್ರದರ್ಶನ ಮೂಡಿ ಬರಲಿಲ್ಲ.
ಇನ್ನು ಮೊಹಮ್ಮದ್ ಸಿರಾಜ್ ಆಟ ಎರಡು ವಿಕೆಟ್‌ಗೆ ಅಷ್ಟೇ ಸೀಮಿತವಾಯಿತು. ಟೆಸ್ಟ್‌ನಲ್ಲಿ ಸ್ಥಾನಗಟ್ಟಿ ಮಾಡಿಕೊಳ್ಳುವ ಅವರ ಆಸೆ ಕಮರಿದೆ.

ಯುವಕರ ಮೇಲೆ ನಂಬಿಕೆ ಇಟ್ಟು ಅನುಭವಿ ಆಟಗಾರರನ್ನು ಕಡೆಗಣಿಸಿದ್ದ ಆಯ್ಕೆ ಸಮಿತಿಯ ನಿರ್ಧಾರ ಕೈ ಕೊಟ್ಟಿದೆ. ವಿದೇಶದಲ್ಲಿ ಬೌನ್ಸ್ ಹಾಗೂ ವೇಗದ ಪಿಚ್‌ಗಳಲ್ಲಿ ಆಡಿದ ಅನುಭವ ಹೊಂದಿರುವ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್ ತಂಡದಿಂದ ಹೊರಗಿಟ್ಟ ಆಯ್ಕೆ ಸಮಿತಿ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ.
ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಟೆಸ್ಟ್ ಸ್ಪೆಷಲಿಸ್ಟ್‌ಗಳನ್ನು ಕಡೆಗಣಿಸಲಾಗಿದೆ. ಟೆಸ್ಟ್ ಎಂದರೆ ನಿಂತು ಸಮಯ ಕಳೆದು ಆಡಬೇಕು. ಈಗಿನ ಯುವಕರು ಟಿ20 ಫಾರ್ಮೆಟ್‌ಗೆ ತಮ್ಮನ್ನು ತಾವು ಒಗ್ಗಿಸಿಕೊಂಡಿದ್ದು, ರೆಡ್ ಬೌಲ್ ಕ್ರಿಕೆಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.