ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 280 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದು ಭಾರತದ ಟೆಸ್ಟ್ ಇತಿಹಾಸದಲ್ಲಿ ಸ್ಮರಣೀಯ ಗೆಲುವು.
ಮೊದಲ ಬಾರಿಗೆ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿಗಿಂತ ಹೆಚ್ಚು ಗೆಲುವು ದಾಖಲಿಸಿದೆ. ಭಾರತ ಇದುವರೆಗೆ 580 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 179 ರಲ್ಲಿ ಗೆಲುವು ಕಂಡಿದೆ. 178 ಪಂದ್ಯಗಳಲ್ಲಿ ಸೋಲು ಕಂಡರೆ, 222 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.

ಈಗ ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಟೆಸ್ಟ್ ಗೆಲುವಿಗೆ ಟೀಮ್ ಇಂಡಿಯಾದ ಐವರು ಆಟಗಾರರು ಪ್ರಮುಖ ಕಾರಣನಾದರು. ಈ ಐವರು ಆಟಗಾರರು ಟೀಮ್ ಇಂಡಿಯಾದ ಗೆಲುವನ್ನು ಖಚಿತಪಡಿಸಿದರು. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಈ ಐವರು ಆಟಗಾರರನ್ನು ಹೊಗಳಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಭಾರತದ ಗೆಲುವಿಗೆ ಪ್ರಮುಖ ಕಾರಣ. ಭರ್ಜರಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಅಶ್ವಿನ್ ಬಾಂಗ್ಲಾದೇಶವನ್ನು ಕಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 144 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ರವೀಂದ್ರ ಜಡೇಜಾ ಜೊತೆಗೂಡಿದ ಅಶ್ವಿನ್ ತಂಡವನ್ನು ಬೃಹತ್ ಮೊತ್ತದ ಕಡೆ ಕೊಂಡೊಯ್ದರು.
ಈ ವೇಳೆ ಅಶ್ವಿನ್ (113) ಬಿರುಸಿನ ಶತಕ ಬಾರಿಸಿದರು. ಇದಾದ ಬಳಿಕ ಬೌಲಿಂಗ್‌ನಲ್ಲೂ ಅದ್ಭುತ ಸಾಧನೆ ಮಾಡಿದರು. ಈ ಅನುಭವಿ ಸ್ಪಿನ್ನರ್ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಉರುಳಿಸಿ ಮಿಂಚಿದರು. ಈ ಪ್ರದರ್ಶನಕ್ಕಾಗಿ ಅವರಿಗೆ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದರು.
ಡಿಸೆಂಬರ್ 2022 ರ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ರಿಷಬ್ ಪಂತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಜವಬ್ದಾರಿಯುತ ಆಟವಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 52 ಎಸೆತಗಳಲ್ಲಿ 39 ರನ್ ಗಳಿಸಿ ಟೀಮ್ ಇಂಡಿಯಾಕ್ಕೆ ಭದ್ರ ಬುನಾದಿ ಹಾಕಿಕೊಟ್ಟರೆ, ಎರಡನೇ ಇನ್ನಿಂಗ್ಸ್‌ನಲ್ಲಿ 128 ಎಸೆತಗಳಲ್ಲಿ 109 ರನ್ ಗಳಿಸಿ ಎಲ್ಲರ ಮನ ಗೆದ್ದರು. ವಿಕೆಟ್ ಹಿಂದೆ ಪಂತ್ ಕೂಡ ಉತ್ತಮ ಪ್ರದರ್ಶನ ನೀಡಿದರು. ನಾಯಕ ರೋಹಿತ್ ಶರ್ಮಾ ಕೂಡ ಪಂತ್ ಅವರನ್ನು ಶ್ಲಾಘಿಸಿದರು.
ಪಂತ್ ಜೊತೆಗೂಡಿದ ಶುಭ್‌ಮನ್ ಗಿಲ್ ಕೂಡ ಬಾಂಗ್ಲಾದೇಶ ಬೌಲರ್‌ಗಳಿಗೆ ಬೆವರಿಳಿಸಿದರು. ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ನಾಲ್ಕನೇ ಶತಕ ಗಳಿಸಿದರು. ಇತ್ತೀಚಿನ ದಿನಗಳಲ್ಲಿ ಶುಭ್‌ಮನ್ ಫಾರ್ಮ್ ಕಳೆದುಕೊಂಡಿದರು. ಮೊದಲ ಇನ್ನಿಂಗ್ಸ್‌ಗೆ ಹೋಲಿಸಿದರೆ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಹೆಚ್ಚು ಆಕ್ರಮಣಕಾರಿ ಆಟವಾಡಿದರು.
ಗಿಲ್ 176 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 119 ರನ್ ಗಳಿಸಿದರು. ಇದಲ್ಲದೆ, ಬಿಸಿಸಿಐ ಆಯ್ಕೆ ಸಮಿತಿ ಇಟ್ಟಿದ್ದ ನಂಬಿಕೆಯನ್ನೂ ಉಳಿಸಿಕೊಂಡರು. ಅವರನ್ನು ಮುಂದಿನ ಟೀಮ್ ಇಂಡಿಯಾ ನಾಯಕನನ್ನಾಗಿ ಮಾಡಲು ಬಿಸಿಸಿಐ ತಯಾರಿ ನಡೆಸುತ್ತಿದೆ. ಪ್ರಸ್ತುತ ಟೀಮ್ ಇಂಡಿಯಾದ ಉಪನಾಯಕರಾಗಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅವರೊಂದಿಗೆ ಮಹತ್ವದ ಜೊತೆಯಾಟವಾಡಿದ ರವೀಂದ್ರ ಜಡೇಜಾ ಶತಕ ವಂಚಿತರಾದರು. ಅವರು 86 ರನ್ ಗಳಿಸಿದ್ದಲ್ಲದೆ, ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 5 ವಿಕೆಟ್‌ಗಳನ್ನು ಪಡೆದು ಟೀಮ್ ಇಂಡಿಯಾ ಗೆಲುವಿಗೆ ಕೊಡುಗೆ ನೀಡಿದರು. ಜಡೇಜಾ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ಗೆ ಉತ್ತಮ ಬೆಂಬಲ ನೀಡಿ ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದರು.
ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ತಮ್ಮ ಬೆಂಕಿ ಬೌಲಿಂಗ್ ಪ್ರದರ್ಶನ ನೀಡಿದರು. ಕರಾರುವಕ್ಕಾದ ಬೌಲಿಂಗ್ ಮಾಡಿದ ಅವರು ಬಾಂಗ್ಲಾದೇಶ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳಿಗೆ ಕುಸಿಯುವಂತೆ ಮಾಡಿದರು. ಇಲ್ಲಿಂದ ಬಾಂಗ್ಲಾದೇಶಕ್ಕೆ ಪಂದ್ಯದಲ್ಲಿ ಸಂಪೂರ್ಣ ಹಿನ್ನಡೆಯಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರ ಬುಮ್ರಾ ಮೊದಲ ವಿಕೆಟ್ ಪಡೆದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 5 ವಿಕೆಟ್ ಕಬಳಿಸಿದರು.