2ನೇ ಏಕದಿನದಲ್ಲಿ ಭಾರತದ ಜಯಕ್ಕೆ ಕಾರಣವಾದ 5 ಅಂಶ
ಕೋಲ್ಕತಾ, ಸೆಪ್ಟೆಂಬರ್ 22: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 50 ರನ್ ಗಳ ಜಯ ಗಳಿಸಿದೆ. ಈ ಮೂಲಕ, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ, 2-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಸೆ. 22ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 50 ಓವರ್ ಗಳಲ್ಲಿ 252 ರನ್ ಗಳ ಮೊತ್ತ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, 43.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 202 ರನ್ ಮಾತ್ರ ಗಳಿಸಿತು.
ಇಡೀ ಪಂದ್ಯದಲ್ಲಿ ಪ್ರಮುಖವಾಗಿ ಗಮನ ಸೆಳೆದದ್ದು ಭಾರತೀಯ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಹ್ಯಾಟ್ರಿಕ್ ವಿಕೆಟ್ ಸಾಧನೆ ಹಾಗೂ ನಾಯಕ ವಿರಾಟ್ ಕೊಹ್ಲಿಯವರ ಭರ್ಜರಿ ಬ್ಯಾಟಿಂಗ್.
ಭಾರತದ ಗೆಲುವಿಗೆ ಕಾರಣವಾಗಿದ್ದು ಕೇವಲ ಇವೆರಡೇ ಅಂಶಗಳಲ್ಲ. ನಿಜ ಹೇಳಬೇಕೆಂದರೆ, ತಂಡಗಳು ಪಾಲ್ಗೊಳ್ಳುವ ಯಾವುದೇ ಪ್ರಕಾರದ ಕ್ರೀಡೆಯಲ್ಲಿ ಯಾವುದೇ ಬಣಕ್ಕೆ ಸಿಗುವ ಗೆಲುವು ಸಾಂಘಿಕವಾಗಿರುತ್ತದೆ.
ಹಾಗಾಗಿ, ಈ ಪಂದ್ಯದಲ್ಲೂ ಕೊಹ್ಲಿ, ಯಾದವ್ ಅವರ ಸಾಧನೆಯ ಜತೆಗೆ ಮತ್ತಷ್ಟು ಅಂಶಗಳು ಭಾರತಕ್ಕೆ ಗೆಲುವನ್ನು ತಂದುಕೊಟ್ಟಿವೆ. ಕೊಹ್ಲಿ, ಯಾದವ್ ಸಾಧನೆ ಜತೆಯಲ್ಲೇ ಅಂಥ ಅಂಶಗಳನ್ನೂ ಇಲ್ಲಿ ಕಲೆಹಾಕಲಾಗಿದೆ.

ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಭಾರತ
ಅಸಲಿಗೆ, ಏಕದಿನ ಪ್ರಾಕಾರದಲ್ಲಿ ಆಸೀಸ್ ನಂಥ ಬಲಿಷ್ಠ ತಂಡದೆದುರು ಭಾರತ ಪೇರಿಸಿದ್ದ 252 ರನ್ ಗಳ ಮೊತ್ತ ಅಂಥಾ ಬೃಹತ್ ಸವಾಲೇನಲ್ಲ. ಆದರೆ, ಆರಂಭಿಕ ರೋಹಿತ್ ಶರ್ಮಾ, ಮಧ್ಯಮ ಕ್ರಮಾಂಕದ ಮನೀಶ್ ಪಾಂಡೆ, ಮಹೇಂದ್ರ ಸಿಂಗ್ ಧೋನಿ ಅವರ ವೈಫಲ್ಯಗಳ ನಡುವೆಯೂ ತಂಡವು ಒಂದು ಸ್ಪರ್ಧಾತ್ಮಕ ಮೊತ್ತ ಪೇರಿಸಿದ್ದು ತಂಡದ ಗೆಲುವಿಗೆ ಮೊದಲ ಕಾರಣ. ಹಾಗೊಂದು ವೇಳೆ, 200 ರನ್ ಗಳ ಆಜುಬಾಜು ಮೊತ್ತ ಪೇರಿಸಿದ್ದರೆ ಭಾರತ ಈ ಪಂದ್ಯ ಗೆಲ್ಲುವುದು ಅನುಮಾನವಾಗುತ್ತಿತ್ತು. ಹಾಗಾಗಿ, ಸ್ಪರ್ಧಾತ್ಮಕ ಮೊತ್ತ ಪೇರಿಸಿದ್ದರ ಶ್ರೇಯಸ್ಸು, ಆರಂಭಿಕ ಆಟಗಾರ ರಹಾನೆ (55), ನಾಯಕ ವಿರಾಟ್ ಕೊಹ್ಲಿಗೇ (92) ಸೇರಬೇಕು.

ಆರಂಭಿಕರ ವಿಕೆಟ್ ಬೇಗನೇ ಪಡೆದದ್ದು ಒಳಿತಾಯಿತು!
ಯಾವುದೇ ಮಾದರಿಯ ಕ್ರಿಕೆಟ್ ಪಂದ್ಯವಿರಲಿ, ಆರಂಭಿಕರ ಯೋಗದಾನ ಅತ್ಯಂತ ಮಹತ್ವದ್ದಾಗಿರುತ್ತದೆ. ಈ ಪಂದ್ಯದ ಬಗ್ಗೆ ಹೇಳುವುದಾದರೆ, ಆಸೀಸ್ ತಂಡದ ಇನಿಂಗ್ಸ್ ಮುಗ್ಗರಿಸಲು ಆರಂಭಿಕರ ವೈಫಲ್ಯವೇ ಕಾರಣ ಎಂದು ಹೇಳಲಡ್ಡಿಯಿಲ್ಲ. ಮೊದಲ 10 ಓವರ್ ಗಳವರೆಗೂ ಕಾರ್ಟ್ ರೈಟ್ ಹಾಗೂ ಡೇವಿಡ್ ವಾರ್ನರ್ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಂತು ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸಿದ್ದರೆ ಪಂದ್ಯದ ಗತಿ ಬೇರೆಯೇ ಆಗಿರುತ್ತಿತ್ತೇನೋ! ಹಾಗೆ ಆಗಲು ಅವಕಾಶ ಕೊಡದೇ ಆ ಇಬ್ಬರನ್ನು ಬೇಗನೇ ಪೆವಿಲಿಯನ್ ಗೆ ಕಳುಹಿಸಿದ್ದು ಭಾರತದ ಗೆಲುವಿಗೆ ಸೋಪಾನವಾಯಿತು.

ಈ ಇಬ್ಬರ ಆರ್ಭಟ ಕಟ್ಟಿಹಾಕಿದ್ದೂ ಭಾರತಕ್ಕೆ ಪ್ಲಸ್ ಪಾಯಿಂಟ್
ಒಂದು ವೇಳೆ ಆರಂಭಿಕರಿಬ್ಬರೂ ಕೈಕೊಟ್ಟಾಗ, ಮಧ್ಯಮ ಕ್ರಮಾಂಕವು ಭರ್ಜರಿ ಬ್ಯಾಟಿಂಗ್ ನಡೆಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟ ಅಸಂಖ್ಯ ಉದಾಹರಣೆಗಳು ಕ್ರಿಕೆಟ್ ಇತಿಹಾಸದಲ್ಲಿವೆ. ಈ ಪಂದ್ಯದಲ್ಲೂ ಅದು ಪುನರಾವರ್ತನೆಯಾಗುವ ಹಲವಾರು ಅವಕಾಶಗಳಿದ್ದವು. ಆದರೆ, ಈ ಅವಕಾಶಗಳನ್ನು ಬೇಗನೇ ಚಿವುಟಿ ಹಾಕಿದ್ದು ವಿಶೇಷ. ಕ್ರೀಸ್ ನಲ್ಲಿ ಗಟ್ಟಿಯಾಗಿ ತಳವೂರಿದ್ದ ಸ್ಟೀವನ್ ಸ್ಮಿತ್ (59), ಟ್ರಾವಿಸ್ ಹೆಡ್ (39) ಅವರ 76 ರನ್ ಜತೆಯಾಟ ಮುರಿದಿದ್ದು ಒಳಿತೇ ಆಯಿತು. ಈ ಶ್ರೇಯಸ್ಸು ಯಜುವೇಂದ್ರ ಚಾಹಲ್ ಗೆ (ಟ್ರಾವಿಸ್ ಹೆಡ್ ವಿಕೆಟ್ ಪಡೆದಿದ್ದಕ್ಕೆ) ಸಿಗಬೇಕು. ಇದಲ್ಲದೆ, ಮ್ಯಾಕ್ಸ್ ವೆಲ್, ಮ್ಯಾಥ್ಯೂ ವೇಡ್, ಆ್ಯಗರ್, ಕುಮಿನ್ಸ್ ಅವರನ್ನು ಚಿಗುರಲು ಬಿಡದಿದ್ದು ಉತ್ತಮ ಅಂಶ. ಇದೆಲ್ಲವೂ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿವೆ.

ಸ್ಟಾಯ್ನಿಸ್ ಗೆ ಸಿಗಲಿಲ್ಲ ಸೂಕ್ತ ಬೆಂಬಲ
ಒಮ್ಮೊಮ್ಮೆ ಹೀಗೂ ಆಗುವುದುಂಟು. ತಂಡದ ಎಲ್ಲಾ ಬ್ಯಾಟ್ಸ್ ಮನ್ ಗಳು ಕೈ ಕೊಟ್ಟರೂ, ಒಬ್ಬೇ ಒಬ್ಬ ಬ್ಯಾಟ್ಸ್ ಮನ್, ತನಗೆ ಕ್ರೀಸ್ ನಲ್ಲಿ ಸೂಕ್ತ ಬೆಂಬಲ ನೀಡುವ ಮತ್ತೊಬ್ಬ ಬ್ಯಾಟ್ಸ್ ಮನ್ ಜತೆಗೆ ನಿಂತು ಸೋಲಬೇಕಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟುಬಿಡುತ್ತಾನೆ. ಈ ಪಂದ್ಯದಲ್ಲೂ ಇಂಥದ್ದೊಂದು ಕೆಲಸಕ್ಕೆ ಕೈ ಹಾಕಿದ್ದರು ಮಧ್ಯಮ ಕ್ರಮಾಂಕದ ಮಾರ್ಕಸ್ ಸ್ಟಾಯ್ನಿಸ್. ಆದರೆ, ಅವರಿಗೆ ಕ್ರೀಸ್ ನಲ್ಲಿ ಒಬ್ಬ ಸೂಕ್ತ ಬ್ಯಾಟ್ಸ್ ಮನ್ ಸಿಗದಂತೆ ಮಾಡಿದ್ದು ಭಾರತೀಯ ಬೌಲರ್ ಗಳ ಹೆಗ್ಗಳಿಕೆ. ರನ್ ಸಿಡಿಸುತ್ತಿದ್ದ ಸ್ಟಾಯ್ನಿಸ್ ನನ್ನು ಕಟ್ಟಿಹಾಕಲು ಆಗದಿದ್ದರೂ, ಆತನಿಗೆ ಯಾವೊಬ್ಬ ಜತೆಗಾರನೂ ಕ್ರೀಸ್ ನಲ್ಲಿ ನಿಲ್ಲದಂತೆ ಮಾಡುವಲ್ಲಿ ಭಾರತೀಯ ಬೌಲರ್ ಗಳು ಯಶಸ್ವಿಯಾಗಿದ್ದು ಭಾರತದ ಗೆಲುವಿಗೆ ಮತ್ತೊಂದು ಕಾರಣ.

ಯಾದವ್ ಸಾಧನೆ ಅನನ್ಯ
ಇನ್ನು, ಅಂತಿಮವಾಗಿ, ಕುಲದೀಪ್ ಯಾದವ್ ಅವರ ಹ್ಯಾಟ್ರಿಕ್ ವಿಚಾರವನ್ನು ಹೇಳಲೇಬೇಕು. ಭಾರತದ ಗೆಲುವಿಗೆ ಮೇಲೆ ಹೇಳಿದ ಅಂಶಗಳೇನೇ ಇರಬಹುದು. ಆದರೆ, ಆ ಎಲ್ಲದಕ್ಕೂ ಕಳಶವಿಟ್ಟಂತಾಗಿದ್ದು ಕುಲದೀಪ್ ಅವರ ಹ್ಯಾಟ್ರಿಕ್ ಸಾಧನೆ. ಇನಿಂಗ್ಸ್ ನ 33ನೇ ಓವರ್ ನ 2, 3 ಹಾಗೂ 4ನೇ ಎಸೆತಗಳಲ್ಲಿ ಮ್ಯಾಥ್ಯೂ ವೇಡ್, ಆ್ಯಗರ್, ಪ್ಯಾಟ್ ಕುಮಿನ್ಸ್ ಅವರ ವಿಕೆಟ್ ಗಳನ್ನು ಕಬಳಿಸಿ, ಆಸೀಸ್ ಇನಿಂಗ್ಸ್ ಗೆ ಭಾರೀ ಪೆಟ್ಟು ನೀಡಿದ ಅವರ ಪ್ರದರ್ಶನ ಸರ್ವಕಾಲಿಕ ಸ್ಮರಣೀಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications