ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದೆ. ಓವಲ್ ಟೆಸ್ಟ್ ಪಂದ್ಯವನ್ನು 6 ರನ್‌ಗಳಿಂದ ಗೆದ್ದ ಭಾರತ, 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2 ರಿಂದ ಸಮಬಲ ಸಾಧಿಸಿದೆ. ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅಮೋಘ ಪ್ರದರ್ಶನ ನೀಡಿ ಜಯದಲ್ಲಿ ಮಿಂಚಿದ್ದಾರೆ. ಟೀಮ್ ಇಂಡಿಯಾ ಈ ಸರಣಿಯಲ್ಲಿ ಈ ರೀತಿಯ ಪ್ರದರ್ಶನ ನೀಡಿದ್ದರ ಹಿಂದೆ ಸಂಘಟಿತ ಆಟದ ಬಲ ಎದ್ದು ಕಾಣುತ್ತಿದೆ.
ಓವಲ್‌ನಲ್ಲಿ ಟೀಮ್ ಇಂಡಿಯಾ 35 ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಈ ಮೂಲಕ ಯಂಗ್ ಟೀಮ್ ಇಂಡಿಯಾ ಕಮಾಲ್ ಪ್ರದರ್ಶನ ನೀಡಿದೆ. ಈ ಸರಣಿಯುದ್ದಕ್ಕೂ ಭಾರತ ಸಂಘಟಿತ ಆಟವನ್ನು ನೀಡುವಲ್ಲಿ ಸಫಲವಾಗಿದೆ. ಆದ್ರೂ ಈ ಸರಣಿಯಲ್ಲಿ ಭಾರತ ಸಮಬಲದ ಪ್ರದರ್ಶನ ನೀಡಿದ್ದಲ್ಲಿ ಐವರು ಆಟಗಾರರ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಆ ಆಟಗಾರರ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಈ ಸರಣಿಯಲ್ಲಿ ರನ್ ಮಹಲ್ ಕಟ್ಟಿ ಅಬ್ಬರಿಸಿದ್ದಾರೆ. ಇವರು ಈ ಸರಣಿಯಲ್ಲಿ ಆಡಿದ 5 ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 75ರ ಸರಾಸರಿಯಲ್ಲಿ 754 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಶತಕಗಳು ಸೇರಿವೆ. ಇವರ ಸೊಗಸಾದ ಆಟದ ಪ್ರದರ್ಶನಕ್ಕೆ ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿದೆ. ಇವರು ಈ ಸರಣಿಯಲ್ಲಿ ಒಟ್ಟು 1150 ಎಸೆತಗಳನ್ನು ಎದುರಿಸುವಲ್ಲಿ ಸಫಲರಾಗಿದ್ದಾರೆ.
ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಭಾರತದ ಪರ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಕೆಎಲ್ ರಾಹುಲ್ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಎದುರಿಸಿದ 1066 ಎಸೆತಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಸೇರಿದಂತೆ 532 ರನ್ ಸಿಡಿಸಿದ್ದಾರೆ. ಇವರು ಹಲವು ಜೊತೆಯಾಟಗಳಲ್ಲಿ ಭಾಗಿಯಾಗಿ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ.
ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಈ ಸರಣಿಯಲ್ಲಿ ಸ್ಥಿರ ಪ್ರದರ್ಶನವನ್ನು ಬ್ಯಾಟಿಂಗ್‌ನಲ್ಲಿ ನೀಡಿದ್ದಾರೆ. ತಮ್ಮ ಅನುಭವದ ಲಾಭ ಪಡೆದು ಆಡಿದ ಇವರು ಹಲವು ಸ್ಮರಣೀಯ ಇನಿಂಗ್ಸ್‌ಗಳನ್ನು ಕಟ್ಟಿದ್ದಾರೆ. ಇವರು ಈ ಸರಣಿಯಲ್ಲಿ ಅತಿ ಹೆಚ್ಚು ಬೌಲ್‌ಗಳನ್ನು ಫೇಸ್ ಮಾಡಿದ ಮೂರನೇ ಆಟಗಾರ. ಇವರು ಈ ವೇಳೆ 937 ಎಸೆತಗಳನ್ನು ಎದುರಿಸಿದ್ದು, 86ರ ಸರಾಸರಿಯಲ್ಲಿ 516 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಅಲ್ಲದೆ ಇವರು ಬೌಲಿಂಗ್‌ನಲ್ಲಿ 7 ವಿಕೆಟ್ ಪಡೆದಿದ್ದಾರೆ.
ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಈ ಸರಣಿಯಲ್ಲಿ ಅಮೋಘ ದಾಳಿ ನಡೆಸಿದರು. ಇವರು ಆಡಿದ 5 ಪಂದ್ಯಗಳಲ್ಲಿ 9 ಇನಿಂಗ್ಸ್ 23 ವಿಕೆಟ್ ಪಡೆದು ಬೀಗಿದ್ದಾರೆ. ಈ ವೇಳೆ ಇವರು 5 ವಿಕೆಟ್‌ಗಳನ್ನು ಸರಣಿಯಲ್ಲಿ ಎರಡು ಬಾರಿ ಪಡೆದಿದ್ದಾರೆ. ಇವರ ಸೊಗಸಾದ ದಾಳಿಯ ಪರಿಣಾಮವೇ ಭಾರತ ಓವಲ್ ಪಂದ್ಯ ಗೆಲ್ಲಲು ಸಾಧ್ಯವಾಯಿತು.
ಇಂಗ್ಲೆಂಡ್ ಪ್ರವಾಸದಲ್ಲಿ ಎಲ್ಲರ ಕಣ್ಣುಗಳು ಯುವ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣಾ ಅವರ ಮೇಲೆ ಇದ್ದವು. ಇವರು ಐಪಿಎಲ್‌ನಲ್ಲಿ ಶಿಸ್ತುಬದ್ಧ ದಾಳಿಯನ್ನು ಸಂಘಟಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಸರಣಿಯಲ್ಲಿ ಇವರಿಗೆ 3 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಲಾಯಿತು. ಈ ವೇಳೆ ಇವರು ರನ್‌ಗಳನ್ನು ಕೊಂಚ ಹೆಚ್ಚಾಗಿ ನೀಡಿದರೂ ಸಹ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಪ್ರಸಿದ್ಧ್ ಈ ಸರಣಿಯಲ್ಲಿ ಒಟ್ಟು 14 ವಿಕೆಟ್ ಪಡೆದಿದ್ದಾರೆ. ಓವಲ್ ಟೆಸ್ಟ್‌ನಲ್ಲಿ ಇವರು ಎರಡೂ ಇನ್ನಿಂಗ್ಸ್‌ನಲ್ಲಿ ತಲಾ 4 ವಿಕೆಟ್ ಪಡೆದ ಹೆಗ್ಗಳಿಕೆ ಹೊಂದಿದ್ದಾರೆ.