ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಹಾಗೂ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರತಿಭಾನ್ವಿತ ಆಟಗಾರ. ಆದರೆ, ಕೋಚ್ ಆಗಿ ಫೇಲ್ ಆಗ್ತಾ ಇದ್ದಾರಾ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿವೆ. ವಿದೇಶಿ ನೆಲದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡ್ತಾ ಇದ್ದ ರಾಹುಲ್, ಭಾರತ ತಂಡದ ಮುಖ್ಯ ಕೋಚ್ ಕ್ಯಾಪ್ ತೊಟ್ಟ ಮೇಲೆ ಮಂಕಾದಂತೆ ಕಂಡು ಬಂದಿದೆ. ಇತ್ತೀಚಿಗೆ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಸೋತು ನಿರಾಸೆ ಅನುಭವಿಸಿದ ಬಳಿಕ ಇವರ ಸ್ಥಾನದ ಮೇಲೆ ಪ್ರಶ್ನೆಗಳು ಎದ್ದಿವೆ. ಹಾಗಿದ್ರೆ, ಟೀಮ್ ಇಂಡಿಯಾದ ಕೋಚ್ ಸ್ಥಾನಕ್ಕೆ ಕುತ್ತು ಕಾದಿದೆಯಾ ಎಂಬ ಮಾತು ಹರಿದಾಡುತ್ತಿದೆ.
ರಾಹುಲ್ ದ್ರಾವಿಡ್ ಅಂಡರ್ 19 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿ, ತಂಡಕ್ಕೆ ಜಯದ ಕಿರೀಟ ತೊಡಿಸಿದವರು. ಅಲ್ಲದೆ ಭಾರತ ಎ ತಂಡದ ಪರ ಸಹ ಉತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಆದರೆ ಹಿರಿಯರ ತಂಡದ ಕೋಚ್ ಆದ ಮೇಲೆ ಇವರ, ಕೋಚಿಂಗ್ ಸಾಮರ್ಥ್ಯ ಮಂಕಾಗಿದೆಯಾ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ಭಾರತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪ್ರಯೋಗಗಳನ್ನು ಮಾಡಿ, ಚುಟುಕು ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಟಿ20 ಸರಣಿ ಸೋತ ಬಳಿಕ ದ್ರಾವಿಡ್ ಅವರತ್ತ ಎಲ್ಲರೂ ಬೊಟ್ಟು ತೋರಿಸುವಂತೆ ಆಗಿದೆ.

ಟಿ20 ಇತಿಹಾಸದಲ್ಲಿ ಭಾರತವು ಮೊದಲ ಬಾರಿಗೆ 5 ಪಂದ್ಯಗಳ ದ್ವಿಪಕ್ಷೀಯ ಸರಣಿಯನ್ನು ಕಳೆದುಕೊಂಡಿರುವ ಕಾರಣ, ಈ ಪ್ರಶ್ನೆಯು ಮತ್ತೊಮ್ಮೆ ಭಾರತೀಯ ಚಿಂತಕರನ್ನು ಕಾಡಲಾರಂಭಿಸಿದೆ. ಫ್ಲೋರಿಡಾ ಮೈದಾನದಲ್ಲಿ ಈ ಹೀನಾಯ ಸೋಲಿನ ನಂತರ, ಕೋಚ್ ಸಾಮರ್ಥ್ಯದ ಮೇಲೆ ಪ್ರಶ್ನೆಗಳು ಎದ್ದಿವೆ.
ಮೂರು ತಿಂಗಳ ಹಿಂದೆ, ಓವಲ್ ಸ್ಟೇಡಿಯಂನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾದ ವಿರುದ್ಧ 209 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಕಳೆದ ಹತ್ತು ವರ್ಷಗಳಲ್ಲಿ ಭಾರತ ತಂಡಕ್ಕೆ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. 2013ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾವು 10 ವರ್ಷಗಳಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ವಿಶ್ವ ಪ್ರಶಸ್ತಿಗಳನ್ನು ಗೆದ್ದಿದೆ.
ಭಾರತದ 5 ಐಸಿಸಿ ಟ್ರೋಫಿಗಳಲ್ಲಿ 3 ರಲ್ಲಿ ವಿದೇಶಿ ಕೋಚ್‌ಗಳು ಭಾರತಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. 2013 ರ ನಂತರ ಭಾರತವು ಅನಿಲ್ ಕುಂಬ್ಳೆ, ರವಿಶಾಸ್ತ್ರಿ ಮತ್ತು ಈಗ ರಾಹುಲ್ ದ್ರಾವಿಡ್ ಅವರಿಗೆ ಕೋಚ್ ಆಗಿ ಜವಾಬ್ದಾರಿ ವಹಿಸಿತ್ತು, ಅಲ್ಲಿಂದ ಭಾರತ ಯಾವುದೇ ಐಸಿಸಿ ಪಂದ್ಯಾವಳಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ.
1971ರಲ್ಲಿ ಏಕದಿನ ಕ್ರಿಕೆಟ್ ಆರಂಭವಾಯಿತು. ಆಗ ಭಾರತೀಯ ಪುರುಷರ ಕ್ರಿಕೆಟ್ ತಂಡದಲ್ಲಿ ಕೋಚ್ ಇರುವ ಸಂಪ್ರದಾಯ ಇರಲಿಲ್ಲ. ಆಗ ಒಬ್ಬ ಮ್ಯಾನೇಜರ್ ತಂಡದ ಜೊತೆ ಇರುತ್ತಿದ್ದರು. ಕೇಕಿ ತಾರಾಪುರ ಭಾರತದ ಮೊದಲ ಮ್ಯಾನೇಜರ್. ಭಾರತವು 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತು, ಆಗ ಪಿಆರ್ ಮಾನ್ ಸಿಂಗ್ ತಂಡದ ಮ್ಯಾನೇಜರ್ ಆಗಿದ್ದರು. 1987ರ ವಿಶ್ವಕಪ್‌ನಲ್ಲಿ ಇಬ್ಬರೂ ತಂಡವನ್ನು ಮುನ್ನಡೆಸಿದ್ದರು. ಟೀಮ್ ಇಂಡಿಯಾ 1992 ಮತ್ತು 1996 ರ ವಿಶ್ವಕಪ್‌ಗಳನ್ನು ಅಜಿತ್ ವಾಡೇಕರ್ ಮೇಲ್ವಿಚಾರಣೆಯಲ್ಲಿ ಆಡಿದೆ. ವಾಡೇಕರ್ ನಂತರ, ಸಂದೀಪ್ ಪಾಟೀಲ್ ತಂಡವನ್ನು ಸೇರಿಕೊಂಡರು ಮತ್ತು ಅಂದಿನಿಂದ ಕೋಚ್ ಎಂಬ ಪದವು ಚಾಲ್ತಿಗೆ ಬಂದಿತು. ಕಪಿಲ್ ದೇವ್ 1999 ರ ವಿಶ್ವಕಪ್‌ನಲ್ಲಿ ಭಾರತ ತಂಡದ ಮ್ಯಾನೇಜರ್ ಮತ್ತು ಕೋಚ್ ಆಗಿದ್ದರು.
2000 ರಲ್ಲಿ ಮೊದಲ ಬಾರಿಗೆ ವಿದೇಶಿ ತರಬೇತುದಾರ ತಂಡ ಸೇರಿಕೊಂಡರು. ಅಲ್ಲಿಂದ ಭಾರತ ಸ್ಥಿರ ಪ್ರದರ್ಶನ ಕೊಡುತ್ತಾ ಬಂದಿತು. ಲಾಲ್‌ಚಂದ್ ರಜಪೂತ್ 2007ರ ಟಿ20 ವಿಶ್ವಕಪ್ ಗೆಲುವಿನ ಸಂದರ್ಭದಲ್ಲಿ ತಂಡದ ಕೋಚ್ ಆಗಿದ್ದರು, ಆದರೆ ಪೂರ್ಣಾವಧಿ ಕೋಚ್ ಆಗಲು ಸಾಧ್ಯವಾಗಲಿಲ್ಲ. ಚಾಪೆಲ್ ನಂತರ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅವರನ್ನು ತರಬೇತುದಾರರನ್ನಾಗಿ ಮಾಡಲಾಯಿತು. ಅವರ ಕೋಚಿಂಗ್‌ನಲ್ಲಿ 2009ರ ಚಾಂಪಿಯನ್ಸ್ ಟ್ರೋಫಿ ಹಾಗೂ 2010ರ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ, ಆದರೆ 28 ವರ್ಷಗಳ ನಂತರ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಗ್ಯಾರಿ ಕರ್ಸ್ಟನ್ ಕೋಚ್ ಆಗಿದ್ದರು, ಅವರ ಅವಧಿ 2011 ರಲ್ಲಿ ಕೊನೆಗೊಂಡಿತು.
ನಂತರ ಬಂದ ಬಂದ ಕೋಚ್‌ಗಳು ಐಸಿಸಿಯ ಯಾವುದೇ ಟ್ರೋಫಿ ಗೆಲ್ಲಲಿಲ್ಲ. ಹೀಗಾಗಿ ಭಾರತ ಮತ್ತೆ ವಿಶ್ವಕಪ್ ಗೆಲ್ಲಬೇಕಂದ್ರೆ ವಿದೇಶಿ ಕೋಚ್‌ಗಳ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆಗಳು ಕಾಡ್ತಾ ಇವೆ.