
ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಹಾಗೂ ಫುಟ್ಬಾಲ್ ಆಟಗಾರನೂ ಆಗಿದ್ದ ಎರಿಕ್ ಫ್ರೀಮನ್ ಅವರು ಡಿಸೆಂಬರ್ 14ರಂದು ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ವಾರ ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಡಿಲೇಡ್‌ನ ಸೆಮಾಫೋರ್‌ನಲ್ಲಿ ಜನಿಸಿದ ಫ್ರೀಮನ್ ಅವರು ಆಸ್ಟ್ರೇಲಿಯಾ ತಂಡದ ಪರವಾಗಿ 11 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 345 ರನ್ ಹಾಗೂ 34 ವಿಕೆಟ್ ಪಡೆದಿದ್ದಾರೆ. ಸೌಥ್ ಆಸ್ಟ್ರೇಲಿಯಾ ಪರವಾಗಿ 1964-74ರ ಅವಧಿಯಲ್ಲಿ 83 ಪಂದ್ಯಗಳಲ್ಲಿ ಆಡಿದ್ದಾರೆ.
ಇನ್ನು ಚಳಿಗಾಲದ ಅವಧಿಯಲ್ಲಿ ಫೀಮನ್ ಅವರು ಫುಟ್ಬಾಲ್ ಕಡೆಗೆ ಗಮನಹರಿಸುತ್ತಿದ್ದರು. ಫೋರ್ಟ್ ಅಡಿಲೇಡ್ ತಂಡದ ಪರವಾಗಿ 116 ಪಂದ್ಯಗಳಲ್ಲಿ ಆಡಿರುವ ಫ್ರೀಮನ್ ಅವರು 390 ಗೋಲ್ ಬಾರಿಸಿದ್ದಾರೆ.
ಆಸ್ಟ್ರೇಲಿಯಾ ಹಾಗೂ ಸೌಥ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಫ್ರೀಮನ್ ಅವರ ಸಹ ಆಟಗಾರನಾಗಿದ್ದ ಕೆನ್ ಕೆಜಿ ಕನ್ನಿಂಗ್‌ಹಮ್ ಫ್ರೀಮನ್ ನಿಧನದ ಬಗ್ಗೆ ಪ್ರತಿಕ್ರಿಯಿಸಿದ್ದು ಆಸ್ಟ್ರೇಲಿಯಾ ತಂಡದ ಪರವಾಗಿ ಫ್ರೀಮನ್ ಇನ್ನಷ್ಟು ಹೆಚ್ಚಿನ ಪಂದ್ಯಗಳಲ್ಲಿ ಆಡಬೇಕಾಗಿತ್ತು. ಆಸ್ಟ್ರೇಲಿಯಾದ ಪ್ರಥಮದರ್ಜೆ ಕ್ರಿಕೆಟ್‌ನ ಟ್ರೋಫಿ ಶೀಫೆಲ್ಡ್ ಶೀಲ್ಡ್‌ನ 1970-71ನೇ ಆವೃತ್ತಿಯಲ್ಲಿ ನ್ಯೂಸೌತ್‌ವೇಲ್ಸ್ ವಿರುದ್ಧದ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ಗೆಲ್ಲಲು ಫ್ರೀಮನ್ ಪಾತ್ರ ಪ್ರಮುಖವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಫ್ರೀಮನ್ ಅವರ ನಿಧನಕ್ಕೆ ಆಸ್ಟ್ರೇಲಿಯಾದ ಪ್ರಮುಖ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ . ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಫ್ರೀಮನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. 1968ರಲ್ಲಿ ಗಾಬಾದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಫ್ರೀಮನ್ ಆಸ್ಟ್ರೇಲಿಯಾಗೆ ಪದಾರ್ಪಣೆಯನ್ನು ಮಾಡಿದ್ದರು. ಈ ಪಂದ್ಯದಲ್ಲಿ ಅವರು ಭಾರತದ ಆರಂಭಿಕರಿಬ್ಬರನ್ನು ಬಲಿ ಪಡೆದುಕೊಂಡಿದ್ದರು.