
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಭಾರತ 4-0 ಅಂತರದಲ್ಲಿ ಗೆಲ್ಲುತ್ತದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕೆಎಲ್ ರಾಹುಲ್ ಕಳಪೆ ಫಾರ್ಮ್ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಕೆಎಲ್ ರಾಹುಲ್ ಸುದೀರ್ಘ ಅವಧಿಯಿಂದ ರನ್ ಗಳಿಸಲು ವಿಫಲವಾಗುತ್ತಿದ್ದು, ಅವರು ಕಟುವಾದ ಟೀಕೆಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ ಎಂದು ಗಂಗೂಲಿ ಹೇಳಿದ್ದಾರೆ. ಈ ಹಿಂದೆ ಕೂಡ ಪ್ರಮುಖ ಆಟಗಾರರು ರನ್ ಗಳಿಸದಿದ್ದಾಗ ಟೀಕೆಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೆಎಲ್ ರಾಹುಲ್ ಸದ್ಯ ಸತತವಾಗಿ ರನ್ ಗಳಿಸಲು ವಿಫಲವಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಅವರನ್ನು ಉಪನಾಯಕನ ಸ್ಥಾನದಿಂದ ತೆಗೆಯಲಾಗಿದೆ. 3ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ತಂಡದಲ್ಲಿ ಅವಕಾಶ ಪಡೆಯುವುದು ಕೂಡ ಕಷ್ಟವಾಗಿದೆ.
ಕೊನೆಯ 10 ಟೆಸ್ಟ್ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಒಮ್ಮೆಯೂ 25 ರನ್‌ಗಳ ಗಡಿಯನ್ನು ದಾಟಿಲ್ಲ. 47 ಟೆಸ್ಟ್ ಪಂದ್ಯಗಳನ್ನು ಆಡಿರುವ 35ರ ಸರಾಸರಿಗಿಂತ ಕಡಿಮೆ ರನ್ ಗಳಿಸಿದ್ದಾರೆ. ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದ ಕೆಎಲ್ ರಾಹುಲ್ ನಂತರ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡಲಾಗುತ್ತದೆ
ಸತತ ವೈಫಲ್ಯಗಳ ನಡುವೆಯೂ ಕೆಎಲ್ ರಾಹುಲ್‌ಗೆ ಯಾಕೆ ಅವಕಾಶ ನೀಡಲಾಗುತ್ತಿದೆ ಎನ್ನುವ ಬಗ್ಗೆ ಕೂಡ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. "ಹೆಚ್ಚಿನ ಗಮನ ಇರುವ ಕಾರಣ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ತಂಡಕ್ಕೆ ಆತ ಯಾಕೆ ಪ್ರಮುಖ ಆಟಗಾರ ಎನ್ನುವುದನ್ನು ತಂಡದ ಮ್ಯಾನೇಜ್‌ಮೆಂಟ್ ಗಮನಿಸುತ್ತದೆ. ತಂಡದ ಕೋಚ್ ಮತ್ತು ನಾಯಕ ಏನು ಯೋಚಿಸುತ್ತಾರೆ, ಯಾರಲ್ಲಿ ನಂಬಿಕೆ ಇಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ" ಎಂದು ಗಂಗೂಲಿ ಹೇಳಿದರು.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಕೆಎಲ್ ರಾಹುಲ್ ಆಡಿದ ಗುಣಮಟ್ಟದ ಇನ್ನಿಂಗ್ಸ್ ಅನ್ನು ಗಂಗೂಲಿ ನೆನಪಿಸಿಕೊಂಡರು. ಒಂಬತ್ತು ವರ್ಷಗಳಿಂದ ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ ಕೆಎಲ್ ರಾಹುಲ್ ಕೇವಲ 5 ಶತಕಗಳನ್ನು ಮಾತ್ರ ಗಳಿಸಿದ್ದಾರೆ. ಕೆಎಲ್ ರಾಹುಲ್‌ರಂತಹ ಪ್ರತಿಭಾವಂತ ಆಟಗಾರರ ಮೇಲೆ ಜನ ಹೆಚ್ಚಿನ ನಿರೀಕ್ಷೆ ಹೊಂದಿರುತ್ತಾರೆ ಎಂದು ಗಂಗೂಲಿ ಹೇಳಿದರು.
"ಕೆಎಲ್ ರಾಹುಲ್ ಈ ಮೊದಲು ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ತಂಡದಲ್ಲಿ ಅಗ್ರ ಕ್ರಮಾಂಕದಲ್ಲಿ ಆಡುವಾಗ ಜನ ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಾರೆ. ಇತರೆ ಆರಂಭಿಕ ಆಟಗಾರರು ಹೊಂದಿರುವ ದಾಖಲೆ ಆ ರೀತಿ ಇದೆ" ಎಂದು ಗಂಗೂಲಿ ಹೇಳಿದರು.