
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿಗ್ಗಜ ಆಟಗಾರ ಕಪಿಲ್ ದೇವ್ ಎದೆಯಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಕಪಿಲ್ ದೇವ್ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ.
ಕಳೆದ ಶುಕ್ರವಾರದಂದು ಕಪಿಲ್‌ದೇವ್ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ದೆಹಲಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಅವರಿಗೆ ಅಂದು ರಾತ್ರಯೇ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ನಡೆಸಲಾಗಿತ್ತು. ಎರಡು ದಿನಗಳ ಬಳಿಕ ಕಪಿಲ್ ದೇವ್ ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
1983ರ ವಿಶ್ವಕಪ್ ಗೆದ್ದ ತಂಡದ ನಾಯಕ ಕಪಿಲ್ ದೇವ್ ಒಮದಿ ದಿನದ ಹಿಂದೆಯಷ್ಟೇ ತಮ್ಮ ಆರೋಗ್ಯದ ಚೇತರಿಕೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. "ತಾನು ಚೇತರಿಕೆಯ ಹಾದಿಯಲ್ಲಿದ್ದೇನೆ. ನನಗಾಗಿ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ಟ್ವೀಟ್ ಸಂದೇಶವನ್ನು ನೀಡಿದ್ದರು.
ಕಪಿಲ್ ದೇವ್ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುವ ವಿಚಾರವನ್ನು ಮಾಜಿ ಕ್ರಿಕೆಟಿಗ, ಕಪಿಲ್ ದೇವ್ ತಂಡದ ಸಹ ಆಟಗಾರ ಚೇತನ್ ಶರ್ಮಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಪಿಲ್‌ದೇವ್‌ಗೆ ಆ್ಯಂಜಿಯೋಸ್ಲಾಸ್ಟಿ ಮಾಡಿದ ವೈದ್ಯರ ಜೊತೆಗೆ ಡಿಸ್ಚಾರ್ಜ್ ಆಗುವ ಸಂದರ್ಭದ ಫೋಟೋವನ್ನು ಚೇತನ್ ಶರ್ಮಾ ಹಂಚಿಕೊಂಡಿದ್ದಾರೆ.
ಕಪಿಲ್ ದೇವ್ ಲಘು ಹೃದಯಾಘಾತಕ್ಕೆ ಒಳಗಾದ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು, ದಿಗ್ಗಜ ಕ್ರಿಕೆಟಿಗರು ಕಪಿಲ್ ದೇವ್ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆಯನ್ನು ಮಾಡಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಕಪಿಲ್ ದೇವ್ ಶೀಘ್ರದಲ್ಲಿ ಚೇತರಿಕೆಯನ್ನು ಕಾಣಲಿ ಎಂದು ಶುಭಹಾರೈಸಿದ್ದರು.