ಐಪಿಎಲ್ ಭಾರತೀಯ ಯುವ ಕ್ರಿಕೆಟಿಗರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದ ಮಾಜಿ ಕ್ರಿಕೆಟಿಗ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತೀಯ ಕ್ರಿಕೆಟ್ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಲು ಪ್ರಾರಂಭಿಸಿದೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಹೆಚ್ಚಿನ ಯುವ ಕ್ರಿಕೆಟಿಗರು, ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್‌ನಲ್ಲಿ ಆಡಲು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಐಪಿಎಲ್ ಯುವ ಕ್ರಿಕೆಟಿಗರಿಗೆ ಹೆಚ್ಚು ಹಣವನ್ನು ಗಳಿಸಲು ತ್ವರಿತ ಮಾರ್ಗವನ್ನು ನೀಡಿದೆ. ಇದರಿಂದಾಗಿ ದೇಶೀಯವಾಗಿ ನಡೆಯುವ ಏಕದಿನ, ಟೆಸ್ಟ್ ಸ್ವರೂಪಗಳಲ್ಲಿ ಆಡಲು ಅವರು ಆದ್ಯತೆ ನೀಡುತ್ತಿಲ್ಲ ಎಂದು ಹಾಗ್ ಹೇಳಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿ, ಯುವಕರ ಮೇಲೆ ಐಪಿಎಲ್ ಬೀರುತ್ತಿರುವ ಪ್ರಭಾವದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
"ಐಪಿಎಲ್ ಭಾರತೀಯ ಕ್ರಿಕೆಟ್‌ನ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ವ್ಯವಸ್ಥೆಯ ಮೂಲಕ ಬರುವ ಯುವ ಆಟಗಾರರು ಟಿ20 ಐಪಿಎಲ್ ಕ್ರಿಕೆಟ್ ಆಡಲು ಹೆಚ್ಚು ಗಮನಹರಿಸಿದ್ದಾರೆ ಏಕೆಂದರೆ ಅದರಲ್ಲಿ ಹೆಚ್ಚು ಹಣ ಸಿಗುತ್ತದೆ. ತ್ವರಿತವಾಗಿ ಹಣ ಸಿಗುತ್ತದೆ, ಎರಡು ತಿಂಗಳಿನಲ್ಲಿ ಪಂದ್ಯಾವಳಿ ಮುಗಿಯುತ್ತದೆ. ಇದು ಸುಲಭವಾಗಿ ಹಣ ಗಳಿಸುವ ಮಾರ್ಗವಾಗಿದೆ" ಎಂದು ಹಾಗ್ ಹೇಳಿದರು.

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ ನೀಡಬೇಕು
ಬ್ರಾಡ್ ಹಾಗ್ ಕ್ರಿಕೆಟ್‌ನ ಮೂರು ಮಾದರಿಯಲ್ಲಿ ಆಡಿದ್ದಾರೆ. ಆಟಗಾರನ ಮನೋಧರ್ಮದ ನಿಜವಾದ ಪರೀಕ್ಷೆಯು ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಬೌಲರ್ ಗಳು ವಿಕೆಟ್ ಪಡೆಯಲು ಬ್ಯಾಟರ್ ವಿರುದ್ಧ ಯಾವ ತಂತ್ರ ರೂಪಿಸಬೇಕು ಎನ್ನುವುದನ್ನು ದೀರ್ಘಸ್ವರೂಪದ ಕ್ರಿಕೆಟ್‌ನಲ್ಲಿ ಕಲಿಯುತ್ತಾರೆ. ಹಾಗೆಯೇ ಬ್ಯಾಟರ್ ಕೂಡ ತಮ್ಮ ಇನ್ನಿಂಗ್ಸ್ ಅನ್ನು ವೇಗಗೊಳಿಸಲು ಕಲಿಯುತ್ತಾರೆ ಎಂದು ಬ್ರಾಡ್ ಹಾಗ್ ಹೇಳಿದರು.

ಹೆಚ್ಚಿನ ಕೌಶಲ್ಯ ಪಡೆಯಲು ಏಕದಿನ, ಟೆಸ್ಟ್ ಆಡಬೇಕು
"ಆದರೆ ಟಿ20 ಕ್ರಿಕೆಟ್ ಮೇಲೆ ಮಾತ್ರ ಗಮನ ಹರಿಸಿದಾಗ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಮೇಲೆ ಆಸಕ್ತಿ ಹೊಂದಿರುವುದಿಲ್ಲ. ಚುಟುಕು ಕ್ರಿಕೆಟ್‌ನಲ್ಲಿ ನಿಮ್ಮ ಕೌಶಲ್ಯವನ್ನು ಸಾಬೀತುಪಡಿಸಲು ಸಾಧ್ಯವಾಗದು." ಎಂದು ಅವರು ಹೇಳಿದ್ದಾರೆ.
ಐಪಿಎಲ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಂತಹ ಹಿರಿಯ ಆಟಗಾರರ ಮೇಲೆ ಮಾತ್ರವಲ್ಲ. ಈಗ ಭಾರತ ತಂಡಕ್ಕೆ ಪದಾರ್ಪಣೆ ಮಾಡುತ್ತಿರುವ ಕಿರಿಯ ಆಟಗಾರರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಹೇಳುತ್ತಾರೆ.
ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಸೋಲನ್ನು ಉದಾಹರಣೆ ನೀಡಿದ ಅವರು, ಹೊಸ ತಲೆಮಾರಿನ ಆಟಗಾರರು ದೀರ್ಘ ಸ್ವರೂಪದ ಮಾದರಿಗೆ ಹೊಂದಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications