ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪರ ಬ್ಯಾಟ್ ಬೀಸಿದ ಹರ್ಭಜನ್ ಸಿಂಗ್
ಇತ್ತೀಚಿನ ಪಂದ್ಯಾವಳಿಗಳಲ್ಲಿ ಭಾರತ ಕ್ರಿಕೆಟ್ ತಂಡದ ಪ್ರದರ್ಶನ ಕಳಪೆಯಾಗಿರುವ ಕಾರಣ, ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಜನರು ಅತಿಯಾಗಿ ಟೀಕಿಸುತ್ತಿದ್ದಾರೆ. ಹೀಗಾಗಿ ರೋಹಿತ್‌ಗೆ ನೈತಿಕ ಬೆಂಬಲವನ್ನು ನೀಡುವುದು ಮುಖ್ಯವಾಗಿದೆ ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ನಾಯಕ ರೋಹಿತ್ ಶರ್ಮಾಗೆ ಮುಂಬರುವ ತಿಂಗಳುಗಳಲ್ಲಿ ತಂಡದ ಮ್ಯಾನೇಜ್‌ಮೆಂಟ್‌ನಿಂದ ಸಂಪೂರ್ಣ ಬೆಂಬಲದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಲಾಗುತ್ತಿದೆ. ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೇರಿದಂತೆ, ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರಿಂದ ಟೀಕೆಗಳನ್ನು ಎದುರಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ಹರ್ಭಜನ್ ಸಿಂಗ್ ಸಂದರ್ಶನ ನೀಡಿದ್ದು, ರೋಹಿತ್ ಶರ್ಮಾ ಅವರ ಮೇಲಿನ ಟೀಕೆಗಳ ಪ್ರಮಾಣವು ವಿಪರೀತವಾಗಿದೆ ಮತ್ತು ತಂಡದ ವೈಫಲ್ಯಕ್ಕೆ ನಾಯಕ ಮಾತ್ರ ಹೊಣೆಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
"ರೋಹಿತ್ ಶರ್ಮಾ ಅವರನ್ನು ಜನರು ಸ್ವಲ್ಪ ಮಿತಿಮೀರಿ ಟೀಕಿಸುತ್ತಿದ್ದಾರೆ ಎಂದು ನಾನು ಕಂಡುಕೊಂಡಿದ್ದೇನೆ. ಕ್ರಿಕೆಟ್ ಒಂದು ತಂಡದ ಆಟವಾಗಿದೆ ಮತ್ತು ಒಬ್ಬ ವ್ಯಕ್ತಿಯು ತಂಡವನ್ನು ಗೆಲುವು ಮತ್ತು ಸೋಲಿಗೆ ಕಾರಣವಾಗುವುದಿಲ್ಲ," ಎಂದು ಹರ್ಭಜನ್ ಸಿಂಗ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿರುವ ಹರ್ಭಜನ್ ಸಿಂಗ್
ರೋಹಿತ್ ಶರ್ಮಾ ಜೊತೆಗೆ ಆಡಿದ ಮತ್ತು ಅವರನ್ನು ಹತ್ತಿರದಿಂದ ಗಮನಿಸಿರುವ ಹರ್ಭಜನ್ ಸಿಂಗ್, ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತ್ರವಲ್ಲದೆ, ಭಾರತ ತಂಡದಲ್ಲಿಯೂ ರೋಹಿತ್ ಶರ್ಮಾ ಗಮನಾರ್ಹ ಗೌರವವನ್ನು ಹೊಂದಿದ್ದಾರೆ ಎಂದು ಹೇಳಿದರು.
ಇತ್ತೀಚಿನ ತಂಡದ ಫಲಿತಾಂಶಗಳ ಆಧಾರದ ಮೇಲೆ ರೋಹಿತ್ ಶರ್ಮಾ ಅವರನ್ನು ನಿರ್ಣಯಿಸುವುದು ಅನ್ಯಾಯ ಮತ್ತು ಜನರು ನಂಬಿಕೆಯನ್ನು ಹೊಂದಿರಬೇಕು. ಭಾರತ ತಂಡದ ನಾಯಕನಿಗೆ ಬೆಂಬಲವನ್ನು ನೀಡಬೇಕು ಎಂದು ಹರ್ಭಜನ್ ಸಿಂಗ್ ಒತ್ತಾಯಿಸಿದರು.
ಹಿಂದಿನ ನಾಯಕರ ಬಗ್ಗೆ ಹರ್ಭಜನ್ ಮಾತು
ಭಾರತ ಕ್ರಿಕೆಟ್ ತಂಡದ ಹಿಂದಿನ ಎಲ್ಲಾ ನಾಯಕರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪ್ರಭಾವಿ ಆಡಳಿತಗಾರರಿಂದ ಅಪಾರ ಬೆಂಬಲವನ್ನು ಹೇಗೆ ಪಡೆದಿದ್ದರು ಎಂಬುದರ ಕುರಿತು ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮಾತನಾಡಿದರು.
ಸೌರವ್ ಗಂಗೂಲಿ ಅವರು ಜಗಮೋಹನ್ ದಾಲ್ಮಿಯಾ ಅವರ ಬೆಂಬಲವನ್ನು ಹೆಚ್ಚು ಪಡೆದಿದ್ದರೆ, ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಅವಧಿಯುದ್ದಕ್ಕೂ ಎನ್. ಶ್ರೀನಿವಾಸನ್ ಅವರ ಸಂಪೂರ್ಣ ಬೆಂಬಲವನ್ನು ಹೊಂದಿದ್ದರು.
ಅದೇ ರೀತಿ, ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಮತ್ತು ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಮುಖ್ಯಸ್ಥ ವಿನೋದ್ ರೈ ಅವರು ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದರು.
"ರೋಹಿತ್ ಶರ್ಮಾಗೆ ಬಿಸಿಸಿಐನಿಂದ ಬೆಂಬಲ ಸಿಗುತ್ತಿರಬೇಕು. ಅವರಿಗೆ ಎಷ್ಟು ಬೆಂಬಲ ಸಿಗುತ್ತಿದೆ ಎಂದು ನನಗೆ ತಿಳಿದಿಲ್ಲ. ಆದರೆ ಅಂತಹ ಬೆಂಬಲವನ್ನು ಹೊಂದಿರುವುದು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ".
ರೋಹಿತ್ ಶರ್ಮಾ ಆ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಆ ಬೆಂಬಲವನ್ನು ಹೊಂದಿರಬೇಕು ಮತ್ತು ಬಿಸಿಸಿಐ ತನ್ನ ಉಳಿದೆಲ್ಲಾ ನಾಯಕರಿಗೆ ನೀಡಿರುವಂತೆ ರೋಹಿತ್ ಶರ್ಮಾ ಬೆಂಬಲ ನೀಡಬೇಕು,'' ಎಂದು ಭಾರತೀಯ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications