
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಹೊರತುಪಡಿಸಿ ಉಳಿದ ಮೂರು ಪಂದ್ಯಗಳಿಗೆ ಅಜಿಂಕ್ಯ ರಹಾನೆ ನಾಯಕನಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ರಹಾನೆ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾದ ನಾಯಕತ್ವ ವಹಿಸುವಾಗ ರಹಾನೆ ಒತ್ತಡಕ್ಕೆ ಒಳಗಾಗಲಾರರು ಎಂದು ಹೇಳಿದ್ದಾರೆ.
ಸುನಿಲ್ ಗವಾಸ್ಕರ್ ಅಜಿಂಕ್ಯ ರಹಾನೆಯ ನಾಯಕತ್ವದ ದಾಖಲೆಗಳ ಮೇಲೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ರಹಾನೆ ಈ ಹಿಂದೆ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಎರಡು ಬಾರಿ ತಂಡವನ್ನು ಮುನ್ನಡೆಸಿದ್ದು ಎರಡು ಬಾರಿಯೂ ತಂಡ ಗೆಲುವನ್ನು ಕಂಡಿದೆ. ಇದು ರಹಾನೆಗೆ ಆತ್ಮವಿಶ್ವಾಸ ಹೆಚ್ಚಿಸಲಿದ ಎಂಬ ಅಭಿಪ್ರಾಯವನ್ನು ಗವಾಸ್ಕರ್ ವ್ಯಕ್ತಪಡಿಸಿದ್ದಾರೆ.
ಅಜಿಂಕ್ಯ ರಹಾನೆ ಮೊಟ್ಟ ಮೊದಲಿಗೆ ಭಾರತ ಟೆಸ್ಟ್ ತಂಡವನ್ನು ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೇ ಮುನ್ನಡೆಸಿದ್ದರು. 2017ರ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭುಜದ ನೋವಿಗೆ ಒಳಗಾಗಿ ಹೊರಬಿದ್ದ ಬಳಿಕ ತಂಡವನ್ನು ಮುನ್ನಡೆಸಿದ್ದರು. 1-1ರಿಂದ ಸಮಬಲಗೊಂಡಿದ್ದ ಆ ಸರಣಿಯ ಅಂತಿಮ ಪಂದ್ಯವನ್ನು8 ವಿಕೆಟ್‌ಗಳಿಂದ ಭಾರತ ಗೆಲ್ಲುವ ಮೂಲಕ 2-1 ಅಂತರದಿಂದ ಗೆಲುವು ಸಾಧಿಸಿತ್ತು.
"ಅಜಿಂಕ್ಯ ರಹಾನೆ ಮೇಲೆ ನಿಜವಾಗಿ ಯಾವುದೇ ಒತ್ತಡಗಳು ಇಲ್ಲ. ಯಾಕೆಂದರೆ ಆತ ಮುನ್ನಡೆಸಿದ್ದ ಎರಡು ಸಂದರ್ಭಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ರಹಾನೆ ಮುನ್ನಡೆಸಿದ್ದರು, ಆಗ ತಂಡ ಗೆದ್ದಿತ್ತು. ಬಳಿಕ ಅಫ್ಘಾನಿಸ್ತಾನದ ವಿರುದ್ಧ ಅವರು ತಂಡವನ್ನು ಮುನ್ನಡೆಸಿದ್ದರು ಆಗಲೂ ಭಾರತ ಗೆದ್ದಿತ್ತು. ಈವರೆಗೆಇನ ನಾಯಕತ್ವದ ಆಧಾರದಲ್ಲಿ ಆತನ ಮೇಲೆ ಯಾವುದೇ ಒತ್ತಡಗಳು ಇಲ್ಲ" ಎಂದು ಸುನಿಲ್ ಗವಾಸ್ಕರ್ ಹೇಳಿಕೆಯನ್ನು ನೀಡಿದ್ದಾರೆ.
ಅಜಿಂಕ್ಯ ರಹಾನೆಗೆ ತಾನು ಮೂರು ಟೆಸ್ಟ್ ಪಂದ್ಯಗಳಿಗೆಮಾತ್ರವೇ ನಾಯಕನಾಗಿ ಇರಲಿದ್ದೇನೆ ಎಂಬುದು ತಿಳಿದಿದೆ. ನಾಯಕನಾಗಿ ಮುಂದುವರಿಯುವ ಬಗ್ಗೆ ಅವರಲ್ಲಿ ಚಿಂತನೆಗಳು ಬರಲಿದೆ ಎಂದು ನಾನು ಭಾವಿಸುವುದಿಲ್ಲ. ಆತ ತನ್ನ ಆಟದ ಭಾಗವಾಗಿ ಅದನ್ನು ಪ್ರಾಮಾಣಿಕವಾಗಿ ಮಾಡುತ್ತಾನೆ. ಇದು ತಂಡದ ಪ್ರದರ್ಶನಕ್ಕೆ ಪೂರಕವಾಗಿರಲಿದೆ ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.