
ಮುಂಬೈ, ಜನವರಿ 18: ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ ಅವರು ನಿಧನರಾಗಿದ್ದಾರೆ. ನಾಡಕರ್ಣಿಯವರಿಗೆ 87 ವರ್ಷ ವಯಸ್ಸಾಗಿತ್ತು. 1955 ಮತ್ತು 1968ರ ನಡುವೆ ಬಾಪು ಒಟ್ಟು 41 ಟೆಸ್ಟ್ ಪಂದ್ಯಗಳಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು.
ದೇಸಿ ಕ್ರಿಕೆಟ್‌ನಲ್ಲಿ ಮುಂಬೈ ಮತ್ತು ಮಹಾರಾಷ್ಟ್ರ ತಂಡಗಳನ್ನು ಪ್ರತಿನಿಧಿಸಿದ್ದ ಬಾಪು ನಾಡಕರ್ಣಿ, 41 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 88 ವಿಕೆಟ್‌ಗಳನ್ನು ಪಡೆದಿದ್ದಾರೆ. 1968ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 63 ರನ್‌ಗೆ 6 ವಿಕೆಟ್ ಉರುಳಿಸಿದ್ದು ಬಾಪು ಅವರ ವೃತ್ತಿ ಜೀವನದ ಅತ್ಯುತ್ತಮ ಸಾಧನೆ.
67 ಟೆಸ್ಟ್ ಇನ್ನಿಂಗ್ಸ್‌ನಲ್ಲಿ 25.70ರ ಸರಾಸರಿಯಂತೆ ನಾಡಕರ್ಣಿ 1,414 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧ ಶತಕಗಳು ಮತ್ತು 1 ಅಜೇಯ ಶತಕ ಸೇರಿದೆ. 1964ರ ಫೆಬ್ರವರಿಯಲ್ಲಿ ಕಾನ್‌ಪುರ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಡಕರ್ಣಿ ಅಜೇಯ ಶತಕ ಬಾರಿಸಿದ್ದರು.
1964ರಲ್ಲಿ ಚೆನ್ನೈ(ಆಗಿನ ಮದ್ರಾಸ್)ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಡಕರ್ಣಿ 21 ಮೇಡನ್‌ಗಳ ಮೂಲಕ ಗಮನ ಸೆಳೆದಿದ್ದರು. ಆವತ್ತು ಬಾಪು 32-27-5-0ರ ಬೌಲಿಂಗ್ ಸಾಧನೆ ತೋರಿದ್ದರು. ಮುಂಬೈನಲ್ಲಿನ ಪುತ್ರಿಯ ನಿವಾಸದಲ್ಲಿದ್ದ ನಾಡಕರ್ಣಿಗೆ ಬಹಳ ಕಾಲದಿಂದ ಅನಾರೋಗ್ಯವಿತ್ತು. ಮುಂಬೈಯ ಆಸ್ಪತ್ರೆಯಲ್ಲಿ ಬಾಪು ಶುಕ್ರವಾರ (ಜ.17) ಕೊನೆಯುಸಿರೆಳೆದಿದ್ದಾರೆ.