ಕ್ಯಾನ್ಸರಿನಿಂದ ಬಳಲುತ್ತಿದ್ದ ಕ್ರಿಕೆಟ್ ದಿಗ್ಗಜ ಅಜಿತ್ ಇನ್ನಿಲ್ಲ

ಮುಂಬೈ, ಆಗಸ್ಟ್ 15: ಟೀಂ ಇಂಡಿಯಾದ ಮಾಜಿ ನಾಯಕ ಅಜಿತ್ ವಾಡೇಕರ್ ಅವರು ಮುಂಬೈನ ಖಾಸಗಿ ಅಸ್ಪತ್ರೆಯಲ್ಲಿ ಬುಧವಾರ(ಆಗಸ್ಟ್ 15)ದಂದು ಕೊನೆಯುಸಿರೆಳೆದಿದ್ದಾರೆ. ಬಹುಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅಜಿತ್ ಅವರಿಗೆ 77 ವರ್ಷ ವಯಸ್ಸಾಗಿತ್ತು.
ಅಜಿತ್ ವಾಡೇಕರ್ ಅವರ ನಾಯಕತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಭಾರತವು ಸರಣಿ ಜಯ ಕಂಡಿತ್ತು. 1971ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಭಾರತ ತಂಡಕ್ಕೆ ಅಜಿತ್ ನಾಯಕರಾಗಿದ್ದರು. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಕೂಡಾ ಭಾರತ ಜಯಭೇರಿ ಬಾರಿಸಿತ್ತು.
ಸುನೀಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಫರೂಕ್ ಇಂಜಿನಿಯರ್, ಸ್ಪಿನ್ ತ್ರಯರಾದ ಬಿಷನ್ ಸಿಂಗ್ ಬೇಡಿ, ಇಎಎಸ್ ಪ್ರಸನ್ನ ಹಾಗೂ ಬಿಎಸ್ ಚಂದ್ರಶೇಖರ್ ಅಲ್ಲದೆ ಎಸ್ ವೆಂಕಟರಾಘವನ್ ರಂಥ ಅತಿರಥ ಮಹಾರಥ ಆಟಗಾರರು ಅಜಿತ್ ಅವರ ನಾಯಕತ್ವದಲ್ಲಿ ಆಡಿದ್ದರು.
ಭಾರತದ ಪರ 37 ಟೆಸ್ಟ್ ಪಂದ್ಯಗಳನ್ನಾಡಿದ ಅಜಿತ್ 2113ರನ್ ಗಳನ್ನು ಗಳಿಸಿದ್ದರು. ಇದರಲ್ಲಿ ಒಂದು ಶತಕ, 14 ಅರ್ಧಶತಕಗಳಿವೆ. 1968ರಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕೈಕ ಶತಕ ಬಾರಿಸಿದರು. ಮುಂಬೈ ಮೂಲದ ಅಜಿತ್ ಅವರು 2 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು ವಿಶೇಷ.
1958-59ರ ಸೀಸನ್ ನಲ್ಲಿ ಬಾಂಬೆ (ಈಗಿನ ಮುಂಬೈ) ಪರ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. 1966ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡಿದರು.
ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಬಳಿಕ, ಮೊಹಮ್ಮದ್ ಅಜರುದ್ದೀನ್ ನಾಯಕರಾಗಿದ್ದ ತಂಡಕ್ಕೆ 1990ರಲ್ಲಿ ಮ್ಯಾನೇಜರ್ ಆಗಿದ್ದರು. ಅನಿಲ್ ಕುಂಬ್ಳೆ, ವೆಂಕಟಪತಿ ರಾಜು, ರಾಜೇಶ್ ಚೌಹಾಣ್ ಸ್ಪಿನ್ ದಾಳಿಗೆ ಎದುರಾಳಿಗಳು ತತ್ತರಿಸುತ್ತಿದ್ದ ಕಾಲ.
ಟೆಸ್ಟ್ ತಂಡದ ಸದಸ್ಯರಾಗಿ, ನಾಯಕರಾಗಿ, ಕೋಚ್/ಮ್ಯಾನೇಜರ್ ಆಗಿ, ಆಯ್ಕೆದಾರರಾಗಿ ಹೆಸರು ಉಳಿಸಿಕೊಂಡ ಲಾಲಾ ಅಮರನಾಥ್, ಚಂದು ಬೋರ್ಡೆ ಅವರಂತೆ ಅಜಿತ್ ವಾಡೇಕರ್ ಅವರನ್ನು ಸ್ಮರಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications