
ನವದೆಹಲಿ, ಜುಲೈ 17: ಶ್ರೀಲಂಕಾ ತಂಡದ ಮಾಜಿ ಕೋಚ್ ಮತ್ತು ಭಾರತದ ಅಂಡರ್ 19 ತಂಡದ ಮಾಜಿ ಕೋಚ್ ಡೇವ್ ವಾಟ್ಮೋರ್, ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಯುವ ಬ್ಯಾಟ್ಸ್ಮನ್ ಶುಭ್‌ಮಾನ್ ಗಿಲ್ ಸೂಕ್ತ ಆಟಗಾರ ಎಂದಿದ್ದಾರೆ. ಈ ಕ್ರಮಾಂಕದಲ್ಲಿ ಗಿಲ್‌ಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಡೇವ್ ಹೇಳಿಕೊಂಡಿದ್ದಾರೆ.
'ಭಾರತಕ್ಕೆ ಗಾಯದ ಹೊಡೆತ ಬೀಳುತ್ತಿರುವುದು ದುರದೃಷ್ಟಕರ. 4ನೇ ಬ್ಯಾಟಿಂಗ್ ಕ್ರಮಾಂಕ ಸೂಕ್ತ ಆಟಗಾರನಿಗಾಗಿ ಎದುರು ನೋಡುವುದನ್ನು ಮುಂದುವರೆಸಿದೆ. ರಿಷಬ್ ಪಂತ್ 4ನೇ ಕ್ರಮಾಂಕದಲ್ಲಿ ಈ ಮೊದಲೇ ಕಾಣಿಸಿಕೊಂಡಿದ್ದರೆ ಇಲ್ಲಿ ಚೆನ್ನಾಗಿ ಆಡುತ್ತಿದ್ದರು,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ವಾಟ್ಮೋರ್ ಅಭಿಪ್ರಾಯಿಸಿದ್ದಾರೆ.
ಮಾತು ಮುಂದುವರೆಸಿದ ಡೇವ್, 'ಈ ಬ್ಯಾಟಿಂಗ್ ಕ್ರಮಾಂಕದ ವಿಚಾರವಾಗಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಹೇಳೋದಾದ್ರೆ, ಶುಭ್‌ಮಾನ್ ಗಿಲ್‌ನಂತ ಆಟಗಾರರು ಈ ಕ್ರಮಾಂಕಕ್ಕೆ ಸೂಕ್ತ. 4ನೇ ಕ್ರಮಾಂಕದಲ್ಲಿ ಕೆಲಸಕ್ಕೆ ಬರಬಲ್ಲ ಕೌಶಲ, ಹೊಡೆತಗಳ ಸಾಮರ್ಥ್ಯ ಅವರಲ್ಲಿದೆ,' ಎಂದರು.

ಎಂಎಸ್ ಧೋನಿ ನಿವೃತ್ತಿ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿರುವ ಆಸ್ಟ್ರೇಲಿಯನ್ ಡೇವ್, 'ಇದು ಅನ್ಯಾಯ ಎಂದು ನಾನು ಭಾವಿಸುತ್ತೇನೆ. ಎಂಎಸ್ ಅವರು ಎಷ್ಟು ಸಮಯ ಆಡಲು ಬಯಸುತ್ತಾರೆ ಅವರೇ ನಿರ್ಧರಿಸಬೇಕು. ಪಂತ್ ಅಥವಾ ಇನ್ನುಳಿದ ಆಟಗಾರರು ಧೋನಿ ಸ್ಥಾನದಲ್ಲಿ ಆಡಲು ಮುಂಬರುವ ದಿನಗಳಲ್ಲಿ ಶಕ್ತರಾದರೆ, ಆಗ ಅವರನ್ನು ತಂಡ ನಿರ್ವಹಣಾ ಸಮಿತಿ ಪರಿಗಣಿಸಬೇಕು,' ಎಂದಿದ್ದಾರೆ.
ಕಳೆದ ಜನವರಿಯಲ್ಲಿ ನ್ಯೂಜಿಲೆಂಡ್‌ಗೆ ಭಾರತ ಪ್ರವಾಸ ಕೈಗೊಂಡಿದ್ದಾಗ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಗಿಲ್ ಅಲ್ಲಿ ಉತ್ತಮ ಪ್ರದರ್ಶನವೂ ನೀಡಿದ್ದರು. ಮುಂದಿನ ದಿನಗಳಲ್ಲೂ ಆಟದ ಬಗ್ಗೆ ವಿಶ್ವಾಸ ಮೂಡಿಸಿದ್ದರು. ಉತ್ತಮ ಕೌಶಲಗಳನ್ನು ಹೊಂದಿರುವ ಗಿಲ್ ಸದ್ಯ ಭಾರತ 'ಎ' ತಂಡದಲ್ಲಿ ಆಡುತ್ತಿದ್ದಾರೆ.