2019ರ ಏಕದಿನ ವಿಶ್ವಕಪ್ ನಿಂದ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಸೋತ ಬಳಿಕ, ಭಾರತೀಯ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು ಎಂದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ಎಂ.ಎಸ್ ಧೋನಿ, ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ ಅವರ ಕಣ್ಣಲ್ಲಿ ನೀರು ತುಂಬಿತ್ತು ಎಂದು ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.
2023ರ ವಿಶ್ವಕಪ್ ನಲ್ಲಿ ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯಿತು. ಈ ಸಮಯದಲ್ಲಿ, ಕಾಮೆಂಟರಿ ಮಾಡುವ ಸಮಯದಲ್ಲಿ ಬಂಗಾರ್ ಈ ವಿಷಯವನ್ನು ಹಂಚಿಕೊಂಡರು. ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಕಂಡಿತ್ತು. ಆ ವೇಳೆಯ ಡ್ರೆಸ್ಸಿಂಗ್ ರೂಮ್ ದೃಶ್ಯವನ್ನು ಬಂಗಾರ್ ವೀಕ್ಷಕರ ಮುಂದೆ ತೆರೆದಿಟ್ಟರು.

2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಭಾರತವನ್ನು 18 ರನ ಗಳಿಂದ ಸೋಲಿಸಿತ್ತು. ಭಾನುವಾರ 4 ವರ್ಷಗಳ ಬಳಿಕ ಎರಡೂ ತಂಡಗಳು ಧರ್ಮಶಾಲಾ ಮೈದಾನದಲ್ಲಿ ಏಕದಿನ ವಿಶ್ವಕಪ್ ನಲ್ಲಿ ಮತ್ತೊಮ್ಮೆ ಮುಖಾಮುಖಿಯಾದವು.
2019ರ ಸೆಮಿಫೈನಲ್ ಪಂದ್ಯದ ಬಗ್ಗೆ ಮಾತನಾಡಿರುವ ಬಂಗಾರ್, ಭಾರತದ ಆಟಗಾರರು ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. 2019ರ ವಿಶ್ವಕಪ್ ನಲ್ಲಿ ತಂಡವು ತನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತಿತ್ತು. ಗ್ರೂಪ್ ಹಂತದಲ್ಲಿ ಭಾರತ 7 ಪಂದ್ಯಗಳನ್ನು ಗೆದ್ದು ಈ ರೀತಿ ಸೋತಿರುವುದು ತಂಡಕ್ಕೆ ನಿರಾಸೆ ತಂದಿತ್ತು.
2019ರ ODI ವಿಶ್ವಕಪ್ ಸೆಮಿಫೈನಲ್ ಪಂದ್ಯ, ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತು. ರಾಸ್ ಟೇಲರ್ 75 ರನ್ ಗಳಿಸಿ ಅಬ್ಬರಿಸಿದ್ದರು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 49.3 ಓವರ್ ಗಳಲ್ಲಿ 221 ರನ್ ಗಳಿಸಿ ಆಲೌಟ್ ಆಯಿತು. ಭಾರತದ ಪರ ಎಂ.ಎಸ್. ಧೋನಿ 50 ರನ್ ಮತ್ತು ರವೀಂದ್ರ ಜಡೇಜಾ 77 ರನ್ ಗಳಿಸಿ, ಸೋಲಿನಲ್ಲೂ ಮಿಂಚಿದ್ದರು. 2019ರಲ್ಲಿ ಸಂಜಯ್ ಬಂಗಾರ್ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದರು. ವಿಶ್ವಕಪ್ ನಂತರ ಬಿಸಿಸಿಐ ಅವರನ್ನು ಬ್ಯಾಟಿಂಗ್ ಕೋಚ್ ಸ್ಥಾನದಿಂದ ಕೈ ಬಿಟ್ಟಿತು.
ತರುವಾಯ, ಫೆಬ್ರವರಿ 2021 ರಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಲಹೆಗಾರರಾಗಿ ಬಂಗಾರ್ ಅವರನ್ನು ನೇಮಿಸಲಾಯಿತು. 9 ನವೆಂಬರ್ 2021 ರಂದು, ಬಂಗಾರ್ RCB ಯ ಮುಖ್ಯ ಕೋಚ್ ಆದರು.