
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾ ತಂಡ ಸೋಲು ಕಂಡಿದ್ದು ಆತಿಥೇಯ ಟೀಮ್ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ. ಈ ಎರಡು ಪಂದ್ಯಗಳಲ್ಲಿಯೂ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಮೇಲುಗೈ ಸಾಧಿಸಲು ಭಾರತ ಒಂದು ಬಾರಿಯೂ ಅವಕಾಶ ನೀಡಲೇ ಇಲ್ಲ. ಮೊದಲ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 132 ರನ್‌ಗಳ ಅಂತರದಿಂದ ಗೆದ್ದುಕೊಮಡ ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು 6 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಆದರೆ ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಪಾಲಿಗೆ ಒಂದು ಸಕಾರಾತ್ಮಕ ಅಂಶವೆಂದರೆ ಅದು ಯುವ ಸ್ಪಿನ್ನರ್ ಟಾಡ್ ಮರ್ಫಿ. 22ರ ಹರೆಯದ ಟಾಡ್ ಮಾರ್ಫಿ ಈ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದು ಅದೇ ಪಂದ್ಯದಲ್ಲಿ ಭಾರತದ 7 ವಿಕೆಟ್ ಪಡೆದು ಮಿಂಚಿದ್ದಾರೆ. ಎರಡನೇ ಪಂದ್ಯದಲ್ಲಿ ಅವರು 3 ವಿಕೆಟ್ ಸಂಪಾದಿಸುವಲ್ಲಿ ಯಶಸ್ವಿಯಾದರು. ಯುವ ಆಟಗಾರನ ಈ ಪ್ರದರ್ಶನಕ್ಕೆ ಆಸ್ಟ್ರೇಲಿಯಾದ ಮಾಜಿ ವೇಗಿ ದಿಗ್ಗಜ ಆಟಗಾರ ಬ್ರೇಟ್ ಲೀ ಪ್ರತಿಕ್ರಿಯೆ ನೀಡಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಬ್ರೇಟ್ ಲೀ ಟಾಡ್ ಮರ್ಫಿ ಬಗ್ಗೆ ಭಾರೀ ಭರವಸೆ ವ್ಯಕ್ತಪಡಿಸಿದ್ದಾರೆ. "ನಾಥನ್ ಲಿಯೋನ್ ಬಳಿಕ ಯಾರು? 22ರ ಹರೆಯದ ಯುವ ಸ್ಪಿನ್ನರ್ ಟಾಡ್ ಮಾರ್ಫಿ ಪ್ರದರ್ಶನ ನೋಡಿದ ಬಳಿಕ ಈ ಪ್ರಶ್ನೆ ಕೇಳುವವರಿಗೆ ಉತ್ತರ ದೊರೆತಿರಬಹುದು. ಆಸ್ಟ್ರೇಲಿಯಾ ಪರವಾಗಿ ಎಂಥಾ ಅದ್ಭುತವಾದ ಪದಾರ್ಪಣೆ. ಆಸ್ಟ್ರೇಲಿಯಾ ತಂಡ ಬಹಳ ದೊಡ್ಡ ಅಂತರದಿಂದ ಸೋಲು ಅನುಭವಿಸಿದ್ದರು ಕೂಡ ಟಾಡ್ ಮಾರ್ಫಿ ವಿಶ್ವ ಕ್ರಿಕೆಟ್ ಅಭಿಮಾನಿಗಳು ತನ್ನತ್ತ ತಿರುಗಿ ನೋಡುವಂತಾ ಪ್ರದರ್ಶನ ನೀಡಿದ್ದಾರೆ" ಎಂದಿದ್ದಾರೆ ಬ್ರೇಟ್ ಲೀ.
"ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲಿಂಗ್ ಮಾಡಿದ ಒಂದೇ ಇನ್ನಿಂಗ್ಸ್‌ನಲ್ಲಿ ಅವರು 7 ವೊಕೆಟ್ ಪಡೆದುಕೊಂಡರು. ಅದರಲ್ಲಿ ಐದು ವಿಕೆಟ್‌ಗಳು, ಕೆಎಲ್ ರಾಹುಲ್, ಆರ್ ಅಶ್ವಿನ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರದ್ದು. ಎಂಥಾ ಸ್ಮರಣಿಯ ಪದಾರ್ಪಣೆ. ಅವರು ಅದನ್ನು ಅವರ ಕುಟುಂಬದ ಉಪಸ್ಥಿತಿಯಲ್ಲಿ ಸಾಧಿಸಿದ್ದರು" ಎಂದು ಮರ್ಫಿ ಪ್ರದರ್ಶನದ ಬಗ್ಗೆ ಪ್ರೇಟ್ ಲೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳಲ್ಲಿಯೂ ಈಗ ಸೋಲು ಕಂಡಂತಾಗಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಸುದೀರ್ಘ ಕಾಲದ ಬಳಿಕ ಭಾರತದ ನೆಲದಲ್ಲಿ ಸರಣಿ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಗಿದೆ. ಸದ್ಯ ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಸಮಬಲಗೊಳಿಸುವ ಅವಕಾಶ ಮಾತ್ರವೇ ಇದೆ.
ಇತ್ತ ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ವೈಟ್‌ವಾಶ್ ಮೂಲಕ ವಶಕ್ಕೆ ಪಡೆಯಲು ಎದುರು ನೋಡುತ್ತಿದೆ. ಸರಣಿಯಲ್ಲಿ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದ್ದು ವೈಟ್‌ವಾಶ್ ಅವಕಾಶ ಭಾರತಕ್ಕೆ ಹೆಚ್ಚಾಗಿದೆ. ಮತ್ತೊಂದೆಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಥಾನ ಖಚಿತಗೊಳ್ಳಲು ಈ ಸರಣಿಯಲ್ಲಿ ಇನ್ನು ಒಂದು ಗೆಲುವಿನ ಅಗತ್ಯ ಮಾತ್ರವೇ ಇದೆ. ಆದರೆ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನ ಪಡೆಯುವ ಅವಕಾಶ ಕೈತಪ್ಪುವ ಭೀತಿಯೂ ಉಂಟಾಗಿದೆ.