
ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿಯನ್ನು ಏಕದಿನ ಮಾದರಿಯ ನಾಯಕತ್ವದಿಂದ ಕೆಳಕ್ಕಿಕಳಿಸಿದ ವಿಚಾರ ಹಾಗೂ ನಂತರ ವಿರಾಟ್ ಕೊಹ್ಲಿ ಮಾಧ್ಯಗೋಷ್ಠಿಯಲ್ಲಿ ಆಡಿದ ಮಾತುಗಳು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ವಿರಾಟ್ ಕೊಹ್ಲಿಯನ್ನು ಏಕದಿನ ಮಾದರಿಯ ನಾಯಕತ್ವದಿಂದ ಕೆಳಕ್ಕಿಳಿಸಿದ ರೀತಿಯ ಬಗ್ಗೆ ಬಿಸಿಸಿಐ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಇನ್ನು ಕೆಲವರು ಬಿಸಿಸಿಐ ನಿರ್ಧಾರ ಸರಿ ಎಂದು ಬಿಸಿಸಿಐಗೆ ಬೆಂಬಲವನ್ನು ನೀಡಿದ್ದರು. ಈ ಮಧ್ಯೆ ಈ ವಿವಾದ ಈಗ ಸ್ವಲ್ಪ ತಣ್ಣಗಾಗಿದ್ದು ಭಾರತೀಯ ಕ್ರಿಕೆಟ್ ತಂಡ ಈಗ ದಕ್ಷಿಣ ಆಫ್ರಿಕಾ ವಿರುದ್ಧಧ ಟೆಸ್ಟ್ ಸರಣಿಯ ಮೇಲೆ ಸಂಪೂರ್ಣ ಚಿತ್ತ ನೆಟ್ಟಿದೆ.
ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ನೀಡಿರುವ ಪ್ರತಿಕ್ರಿಯೆ ಈಗ ಗಮನಸೆಳೆದಿದೆ. ಭಾರತ ತಂಡದ ಮಾಜಿ ವೇಗದ ಬೌಲರ್ ಅತುಲ್ ವಾಸನ್ ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆಯಂತಾ ಮಹತ್ವದ ನಿರ್ಧಾರವನ್ನು ಕೇವಲ ಆಯ್ಕೆಗಾರರು ಮಾತ್ರವೇ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ನಿರ್ಧಾರವನ್ನು ಬಿಸಿಸಿಐ ಖಂಡಿತವಾಗಿಯೂ ತೆಗೆದುಕೊಂಡಿರುತ್ತದೆ ಎಂದು ವಿಶ್ವಾಸದಿಂದಲೇ ಹೇಳಿದ್ದಾರೆ.
"ಬಹುಶಃ ವಿರಾಟ್ ಕೊಹ್ಲಿ 2023ರ ವಿಶ್ವಕಪ್‌ವರೆಗೆ ಏಕದಿನ ನಾಯಕನಾಗಿ ಮುಂದುವರಿಯಲು ಬಯಸಿದ್ದರು. ಭಾರತ ತಮಡಕೂಡ ಋಕದಿನ ಮಾದರಿಯಲ್ಲಿ ಉತ್ತಮವಾದ ಪ್ರದರ್ಶನ ನೀಡುತ್ತಿತ್ತು. ಪ್ರಮುಖ ಟ್ರೋಫಿಯನ್ನು ಗೆಲ್ಲದಿದ್ದರೂ ಅವರು ಅದ್ಭುತವಾದ ಸಾಧನೆ ಮಾಡುತ್ತಿದ್ದರು. ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯುತ್ತಮ ಆಟಗಾರ. ಹೀಗಾಗಿ ಈ ಸಂದರ್ಭವನ್ನು ಉತ್ತಮವಾಗಿ ನಿಭಾಯಿಸಬಹುದಾಗಿತ್ತು. ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ" ಎಂದು ಅತುಲ್ ವಾಸನ್ ಟೀಮ್ ಇಂಡಿಯಾ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದರು. ಅಲ್ಲದೆ ಬಿಸಿಸಿಐ ನಾಯಕತ್ವ ಬದಲಾವಣೆಯ ಬಗ್ಗೆ ಸೂಚನೆಯನ್ನು ನೀಡದೆ ಆಯ್ಕೆ ಮಂಡಳಿ ಮಾತ್ರವೇ ಈ ನಿರ್ಧಾರವನ್ನು ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ಕೂಡ ಅತುಲ್ ವಾಸನ್ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿಯನ್ನು ಸೀಮಿತ ಓವರ್‌ಗಳ ನಾಯಕತ್ವದಿಂದ ಕಿತ್ತು ಹಾಕಲು ಕಾರಣವೇನೆಂದು ಕೇಳಿದಾಗ ಅತುಲ್ ವಾಸನ್ ಉತ್ತರವನ್ನು ನೀಡಿದ್ದಾರೆ. ಇಂತಾ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಾಗ ಕೇವಲ ಒಂದು ಅಂಶವನ್ನು ಪರಿಗಣಿಸಲು ಸಾಧ್ಯವಿಲ್ಲ. ಈ ನಿರ್ಧಾರದ ಹಿಂದೆ ಹಲವು ಕಾರಣಗಳು ಇರಬಹುದು. ಅದರಲ್ಲಿ ಕೆಲ ಪ್ರಮುಖ ಕಾರಣಗಳೆಂದರೆ ಸ್ವತಃ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್, ಐಸಿಸಿ ಟೂರ್ನಿಯಲ್ಲಿ ಗೆಲುವು ಸಾಧಿಸಲು ವಿಫಲವಾಗಿದ್ದು ಹಾಗೂ ತಂಡಕ್ಕೆ ನೂತನ ಕೋಚ್ ನೇಮಕವಾಗಿದ್ದು ಕಾರಣವಾಗಿರಬಹುದು" ಎಂದು ಅತುಲ್ ವಾಸನ್ ಹೇಳಿದ್ದಾರೆ.
"ಇದೆಲ್ಲಾ ಕಾರಣಗಳಿಂದಾಗಿ ಮಂಡಳಿಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆದಿರುತ್ತದೆ. ಬಿಸಿಸಿಐ ಉನ್ನತಾಧಿಕಾರಿಗಳ ವಲಯದಲ್ಲಿ ಈ ವಿಚಾರವಾಗಿ ಒಂದು ಸಾಮೂಹಿಕ ಚಿಂತನೆ ಹರಡಿರಬಹುದು. ಹೀಗಾಗಿ ಅವರೆಲ್ಲರೂ ವಿರಾಟ್ ಕೊಹ್ಲಿಯ ರೆಕ್ಕೆಯನ್ನು ಕಟ್ಟಿಹಾಕಲು ಇದು ಸೂಕ್ತ ಸಮಯ ಎಂದು ಭಾವಿಸಿದ್ದಾರೆ. ಹಾಗಾಗಿಯೇ ಕೊಹ್ಲಿ ಇಷ್ಟಪಡುವುದನ್ನು ಬಿಸಿಸಿಐ ಅನುಮತಿಸುತ್ತಿರಲಿಲ್ಲ. ಅಲ್ಲದೆ ಅವರೊಂದಿಗೆ ಈಗ ರವಿ ಶಾಸ್ತ್ರಿ ಕೂಡ ಇಲ್ಲ" ಎಂದು ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಕ್ಕಿಳಿಸಿದ ವಿಚಾರವಾಗಿ ಮಾಜಿ ವೇಗದ ಬೌಲರ್ ಅತುಲ್ ವಾಸನ್ ಪ್ರತಿಕ್ರಿಯಿಸಿದ್ದಾರೆ.