
ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಆಗಿ ಭರವಸೆ ಮೂಡಿಸಿದ್ದ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಸಂಪೂರ್ಣವಾಗಿ ಮಂಕಾಗಿದ್ದು ಕಳೆದ ನ್ಯೂಜಿಲೆಂಡ್ ಹಾಗೂ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಬಿದ್ದಿದ್ದರು. ಪದೇ ಪದೇ ಕಾಡುತ್ತಿರುವ ಗಾಯ ಹಾಗೂ ಫಿಟ್‌ನೆಸ್ ಸಮಸ್ಯೆಯ ಕಾರಣದಿಂದಾಗಿ ಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಲು ಪಾಂಡ್ಯ ವಿಫಲವಾಗುತ್ತಿದ್ದಾರೆ. ಹೀಗಾಗಿ ವಿಶ್ವ ಕಪ್ ಸಂದರ್ಭದಲ್ಲಿ ಕೇಳಿ ಬಂದ ಟೀಕೆಗಳ ಕಾರಣದಿಂದಾಗಿ ಟೀಮ್ ಇಂಡಿಯಾ ಆಯ್ಕೆ ಸಮಿತಿ ಸಂಪೂರ್ಣ ಫಿಟ್‌ನೆಸ್ ಪಡೆದು ವಾಪಾಸಾಗಲು ಸೂಚಿಸಿದೆ.
ಇನ್ನು ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಹಾದಿಕ್ ಪಾಂಡ್ಯ ಬಗ್ಗೆ ಮಾತನಾಡಿದ್ದಾರೆ. ಹಾರ್ದಿಲ್ ಪಾಂಡ್ಯ ತಮ್ಮ ದುರ್ಬಲ ದೇಹದಲ್ಲಿ ಮಸಲ್‌ಗಳನ್ನು ಸೇರ್ಪಡೆಗೊಳಿಸಬೇಕಿದೆ. ಇಲ್ಲವಾದರೆ ಕ್ರಿಕೆಟ್‌ನ ಒಂದು ಮಾದರಿಯಲ್ಲಿಯೂ ಹಾರ್ದಿಕ್ ಪಾಂಡ್ಯ ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂದಿದ್ದಾರೆ ಸಲ್ಮಾನ್ ಬಟ್. 2018ರ ಬಳಿಕ ಹಾರ್ದಿಕ್ ಪಾಂಡ್ಯ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಶಸ್ತ್ರ ಚಿಕಿತ್ಸೆಯ ನಂತರವೂ ಪಾಂಡ್ಯ ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ.
"ಹಾರ್ದಿಕ್ ಪಾಂಡ್ಯ ಅವರ ದೇಹ ಬಹಳ ದುರ್ಬಲವಾಗಿದೆ. ಹಾಗಾಗಿ ಅವರು ಒಮದು ಮಾದರಿಯಲ್ಲಿಯೂ ಉಳಿದುಕೊಳ್ಳಲು ಸಾಧ್ಯವಿಲ್ಲ. ಅವರು ಸೂಕ್ತವಾದ ಡಯೆಟ್ ಹಾಗೂ ತರಬೇತಿಯ ಮೂಲಕ ಮಸಲ್‌ಗಳನ್ನು ಬೆಳೆಸಿಕೊಳ್ಳಬೇಕಿದೆ. ರವಿ ಶಾಸ್ತ್ರಿ ಇತ್ತೀಚೆಗೆ ಒಂದು ಮಾತನ್ನು ಹೇಳಿದ್ದರು. ಹಾರ್ದಿಕ್ ಪಾಂಡ್ಯ ವಾಪಾಸ್ ಹೋಗಿ ಕಠಿಣ ಪರಿಶ್ರಮವನ್ನು ಪಡಬೇಕಿದೆ. ಹಾಗಾದಲ್ಲಿ ಅವರು ನಾಲ್ಕು ಓವರ್‌ಗಳ ಬೌಲಿಂಗ್ ಮಾಡಲು ಸಾಧ್ಯವಿದೆ ಎಂದಿದ್ದರು. ಹಾಗಂದರೆ ಈ ಕ್ಷಣದಲ್ಲಿ ಅವರು ನಾಲ್ಕು ಓವರ್‌ಗಳ ಬೌಲಿಂಗ್ ಮಾಡಲು ಕೂಡ ಸಮರ್ಥವಾಗಿಲ್ಲ" ಎಂದು ಸಲ್ಮಾನ್ ಬಟ್ ತಮ್ಮ ಯೂಟ್ಯೂನ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸಲ್ಮಾನ್ ಬಟ್ ಟೀಮ್ ಇಂಡಿಯಾದ ಅನುಭವಿ ಆರ್ ಅಶ್ವಿನ್ ಇತ್ತೀಚೆಗೆ ರವಿ ಶಾಸ್ತ್ರಿ ನೀಡಿದ್ದ ಒಂದು ಹೇಳಿಕೆ ತನಗೆ ಸಾಕಷ್ಟು ಬೇಸರ ಮೂಡಿಸಿತ್ತು ಎಂಬ ಮಾತಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 2019ರ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಕೋಚ್ ರವಿ ಶಾಸ್ತ್ರಿ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ವಿದೇಶಿ ನಲದಲ್ಲಿ ಭಾರತದ ನಂಬರ್ 1 ಸ್ಪಿನ್ನರ್ ಎಂಬ ಮಾತನ್ನು ಹೇಳಿದ್ದು ಬೇಸರ ಮೂಡಿಸಿತ್ತು ಎಂದಿದ್ದರು.
ಇದಕ್ಕೆ ಸಲ್ಮಾನ್ ಬಟ್ ಹೊರಗಿನವರ ಪ್ರತಿಕ್ರಿಯೆಗಳು ಆಟಗಾರರ ಮೇಲೆ ಹೆಚ್ಚಿನ ಪರಿನಾಮವನ್ನು ಬೀರಲಾರದು. ಆದರೆ ನಿಮ್ಮ ತಂಡದ ಸದಸ್ಯರಿಂದಲೇ ಅಂತಾ ಮಾತುಗಳು ಬಂದಾಗ ನೋವುಂಟು ಮಾಡುತ್ತದೆಎ ಎಂದಿದ್ದಾರೆ. "ಆಟಗಾರನಾಗಿ ನೀವು ಈ ರೀತಿಯ ಮಾತುಗಳನ್ನು ಕೇಳುತ್ತೀರಿ. ನೀವು ನಿಮ್ಮ ಅತ್ಯುತ್ತಮ ಪ್ರಯತ್ನಗಳೆಲ್ಲವನ್ನೂ ಮಾಡುತ್ತಿರುತ್ತೀರಿ. ಆದರೆ ನೀವು ನಿರೀಕ್ಷಿಸಿದ ಪ್ರದರ್ಶನಗಳನ್ನು ನೀವು ನೀಡದಿದ್ದಾಗ, ನೀವು ಕೆಲ ಟೀಕೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹೊರಗಿನಿಂದ ಯಾರಾದರೂ ಟೀಕಿಸಿದಾಗ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಿಮ್ಮ ತಂಡ ಒಳಗಿನ ಸದಸ್ಯರಿಂದಲೇ ಅಂತಾ ಮಾತುಗಳು ಬಂದಾಗ ಸ್ವಲ್ಪ ನೋಯಿಸುತ್ತದೆ. ಅಶ್ವಿನ್ ವಿಷಯದಲ್ಲೂ ಅದೇ ಆಗಿದೆ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.