ಕನ್ನಡಿಗನನ್ನು ವಿಶೇಷ ಆಟಗಾರ ಎಂದ ಪಾಕ್ ಮಾಜಿ ನಾಯಕ: ಕೊಹ್ಲಿ, ರೋಹಿತ್ ರೀತಿಯ ಆಟಗಾರನಲ್ಲ ಎಂದಿದ್ಯಾಕೆ?

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಟೀಮ್ ಇಂಡಿಯಾದಲ್ಲಿ ಹಾಗೂ ಐಪಿಎಲ್‌ನಲ್ಲಿ ಮಿಂಚುತ್ತಿರುವ ಕನ್ನಡಿಗ ಆಟಗಾರನ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಈ ಆಟಗಾರನನ್ನು ವಿಶೇಷ ಆಟಗಾರ ಎಂದು ರಶೀದ್ ಲತೀಫ್ ಕೊಂಡಾಡಿದ್ದಾರೆ.
ರಶೀದ್ ಲತೀಫ್ ಹೀಗೆ ಪ್ರಶಂಸೆಯ ಮಾತುಗಳನ್ನಾಡಿರುವುದು ಕನ್ನಡಿಗ ಕೆಎಲ್ ರಾಹುಲ್ ಬಗ್ಗೆ. ಈ ಬಾರಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿರುವ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಸ್ಟ್ರೈಕ್‌ರೇಟ್‌ನಲ್ಲಿ ಹಿಂದೆ ಬಿದ್ದಿರುವ ಕಾರಣಕ್ಕೆ ಕೆಎಲ್ ರಾಹುಲ್ ಅವರನ್ನು ರಶೀದ್ ಪ್ರಶ್ನಿಸಿದ್ದಾರೆ. ಕೆಎಲ್ ರಾಹುಲ್ ಅವರ ಸ್ಟ್ರೈಕ್‌ರೇಟ್ ಕಳವಳಕಾರಿ ಅಂಶ ಎಂದಿದ್ದಾರೆ.

ಐಪಿಎಲ್‌ನಲ್ಲಿ ಸ್ಥಿರ ಆಟಗಾರ ಕೆಎಲ್ ರಾಹುಲ್
ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿಕೊಂಡು ಬಂದಿರುವ ಆಟಗಾರ. ಕಳೆದ ಐದು ಆವೃತ್ತಿಗಳಲ್ಲಿ ಕೆಎಲ್ ರಾಹುಲ್ 4 ಆವೃತ್ತಿಯಲ್ಲಿ 600ಕ್ಕೂ ಅಧಿಕ ರನ್‌ಗಳಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಎರಡು ಶತಕವನ್ನು ಗಳಿಸಿರುವ ರಾಹುಲ್ ಎರಡು ಅರ್ಧ ಶತಕವನ್ನು ಕೂಡ ಗಳಿಸಿ ಮಿಂಚಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ 2ನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದ್ದಾರೆ.

ತುಂಬಾ ವಿಶೇಷ ಆಟಗಾರ, ಆದರೆ ಕೊಹ್ಲಿ, ರೋಹಿತ್ ರೀತಿ ಅಲ್ಲ
ಮುಂದುವರಿದು ಮಾತನಾಡಿದ ರಶೀದ್ ಲತೀಫ್ ಕೆಎಲ್ ರಾಹುಲ್ ತುಂಬಾ ವಿಶೇಷ ಆಟಗಾರ ಎಂದಿದ್ದಾರೆ. "ಕೆಎಲ್ ರಾಹುಲ್ ವಿಶೇಷವಾದ ಆಟಗಾರ. ಆದರೆ ರೋಹಿತ್ ಶರ್ಮಾ ರೀತಿ ಅಲ್ಲ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭಿನ್ನ ರೀತಿಯ ಆಟಗಾರರಾಗಿದ್ದಾರೆ. ಕೆಎಲ್ ರಾಹುಲ್ ತಮ್ಮ ಹಣೆಪಟ್ಟಿಯನ್ನು ಬದಲಾಯಿಸಬೇಕಿದೆ. ಅವರು ಹೆಚ್ಚಿನ ಡಾಟ್ ಬಾಲ್‌ಗಳನ್ನು ಆಡುತ್ತಾರೆ. ಅವರಿಂದ ದೊಡ್ಡ ಮೊತ್ತ ಬಂದರೆ ಅವರು ಹೆಚ್ಚಿನ ಎಸೆತಗಳನ್ನು ಎದುರಿಸಿರುತ್ತಾರೆ. ಅವರು ಪಂಜಾಬ್ ಕಿಂಗ್ಸ್ ಪರವಾಗಿ ಆಡುತ್ತಿದ್ದಾಗಲೂ ಇದನ್ನು ನಾನು ಗಮನಿಸಿದ್ದೆ" ಎಂದಿದ್ದಾರೆ ರಶೀದ್ ಲತೀಫ್.

ಐಪಿಎಲ್‌ನಲ್ಲಿ ಪ್ಲೇಆಫ್‌ಗೆ ತಲುಪಿದ್ದ ರಾಹುಲ್ ಪಡೆ
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿರುವ ಕೆಎಲ್ ರಾಹುಲ್ ಪ್ಲೇಆಫ್‌ವರೆಗೆ ತಂಡವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಪ್ಲೇಆಫ್ ಹಂತದಲ್ಲಿ ಆರ್‌ಸಿಬಿ ವಿರುದ್ಧ ಸೋಲು ಅನುಭವಿಸಿದ ಎಲ್‌ಎಸ್‌ಜಿ ನಾಲ್ಕನೇ ತಂಡವಾಗಿ ಹೊರಬಿದ್ದಿದೆ.

ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡ ಕೆಎಲ್
ಇನ್ನು ಕೆಎಲ್ ರಾಹುಲ್ ಮುಂಬರುವ ದಕ್ಷಿಣ ಆಪ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಖಾಯಂ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಹಿನ್ನಲೆಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳನ್ನು ಆಡಲಿದ್ದು ಮೊದಲ ಪಂದ್ಯ ದೆಹಲಿಯಲ್ಲಿ ಜೂನ್ 9ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications