IPL 2025: ಉದ್ಘಾಟನಾ ಆವೃತ್ತಿಯಲ್ಲಿ ಬಾಲ್ ಬಾಯ್; ಇಂದು ಐಪಿಎಲ್ ಸ್ಟಾರ್ ಆಟಗಾರ
ಐಪಿಎಲ್ 2025ರ ಟೂರ್ನಿ ಮಾರ್ಚ್ 22 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಗಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಕಳೆದ ವರ್ಷ ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ ಆಗಿದ್ದರು. ಅವರು ಈಗ ಕೆಕೆಆರ್ ತಂಡದೊಂದಿಗೆ ಇಲ್ಲ. ಕೆಕೆಆರ್ ಅವರನ್ನು ಉಳಿಸಿಕೊಳ್ಳದಿದ್ದಾಗ, ಪಂಜಾಬ್ ಕಿಂಗ್ಸ್ ಐಪಿಎಲ್ ಮೆಗಾ ಹರಾಜಿನಲ್ಲಿ 26.75 ಕೋಟಿ ರೂ.ಗೆ ಖರೀದಿಸಿತು. ಪಂಜಾಬ್ ಕೂಡ ಅವರನ್ನು ನಾಯಕನನ್ನಾಗಿ ಮಾಡಿದೆ. ಪಂಜಾಬ್ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲು ಶ್ರೇಯಸ್ ಸಜ್ಜಾಗಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ರೇಯಸ್ ಅಯ್ಯರ್, "ನಾನು ಹರಾಜಿನಲ್ಲಿ ಆಯ್ಕೆಯಾದಾಗಿನಿಂದ, ನನ್ನ ಆಸೆ ಸ್ಪಷ್ಟವಾಗಿತ್ತು. ಪಂಜಾಬ್ ಕಿಂಗ್ಸ್ ಇನ್ನೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ನನ್ನ ಗುರಿ ಪಂಜಾಬ್ ಟ್ರೋಫಿಯನ್ನು ಎತ್ತಿ ಹಿಡಿಯುವುದು. ಇದು ಐತಿಹಾಸಿಕ ಸಾಧನೆಯಾಗಲಿದೆ. ಅಭಿಮಾನಿಗಳನ್ನು ಸಂತೋಷಪಡಿಸಲು ನಾನು ಬಯಸುತ್ತೇನೆ. ನಾನು ಅವರಿಗೆ ಆಚರಿಸಲು ಒಂದು ಕಾರಣ ನೀಡಲು ಬಯಸುತ್ತೇನೆ. ಋತುವಿನ ಕೊನೆಯಲ್ಲಿ ಪಂಜಾಬಿ ಆಚರಣೆಯು ವಿಶೇಷವಾಗಿರುತ್ತದೆ ಎಂದಿದ್ದಾರೆ.

ಇದೇ ವೇಳೆ ಶ್ರೇಯಸ್ ಅಯ್ಯರ್ ತಮ್ಮ ಮೊದಲ ಐಪಿಎಲ್ ಸೀಸನ್ ನೆನಪನ್ನು ನೆನಪಿಸಿಕೊಂಡಿದ್ದಾರೆ. ಐಪಿಎಲ್ 2008 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯಕ್ಕಾಗಿ ವಾಂಖೆಡೆ ಕ್ರೀಡಾಂಗಣದಲ್ಲಿ ಬಾಲ್ ಬಾಯ್ ಆಗಿದ್ದ ದಿನವನ್ನು ಅಯ್ಯರ್ ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಅಯ್ಯರ್ ಅವರಿಗೆ ಕೇವಲ 14 ವರ್ಷ. "ನಾನು ನನ್ನ ಏರಿಯಾದಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದೆ. ಆ ಸಮಯದಲ್ಲಿ ನಾನು ಮುಂಬೈ ಅಂಡರ್ -14 ತಂಡಕ್ಕಾಗಿ ಆಡುತ್ತಿದ್ದೆ. ಮುಂಬೈ ತಂಡದಲ್ಲಿದ್ದ ಎಲ್ಲಾ ಮಕ್ಕಳನ್ನು ಬಾಲ್ ಬಾಯ್ಸ್ ಆಗಿ ನೇಮಿಸಲಾಗಿತ್ತು. ನಾನು ಅವರಲ್ಲಿ ಒಬ್ಬನಾಗುವ ಅದೃಷ್ಟಶಾಲಿಯಾಗಿದ್ದೆ. ಅದು ಐಪಿಎಲ್‌ನ ನನ್ನ ಮೊದಲ ನಿಕಟ ಅನುಭವವಾಗಿತ್ತು ಎಂದು ಅಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಅಯ್ಯರ್ ಸಾಧನೆ
ಶ್ರೇಯಸ್ ಅಯ್ಯರ್ ಐಪಿಎಲ್‌ನ ಯಶಸ್ವಿ ನಾಯಕರ ಪಟ್ಟಿಯಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ತಂಡಗಳನ್ನು ಫೈನಲ್‌ಗೆ ತಲುಪಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೆ, ಕೆಕೆಕಾರ್ ತಂಡದ ಐಪಿಎಲ್ 2024ರ ಚಾಂಪಿಯನ್ ಕೂಡ ಮಾಡಿದ್ದಾರೆ. ಅಂದು ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಬಾಲ್ ಬಾಯ್ ಆಗಿದ್ದ ಅಯ್ಯರ್ ಇಂದು ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಬ್ಯಾಟಿಂಗ್‌ನಲ್ಲಿಯೂ ತಮ್ಮ ಪರಾಕ್ರಮವನ್ನು ಮೆರೆದಿದ್ದಾರೆ.
ಬಾಲ್ ಬಾಯ್ ಆಗಿದ್ದಾಗ ನಾನು ನಾಚಿಕೆ ಮತ್ತು ಸಂಯಮದಿಂದ ಇದ್ದದ್ದನ್ನು ನೆನಪಿಸಿಕೊಳ್ಳುತ್ತೇನೆ. ಆದರೆ ನನ್ನ ಸ್ನೇಹಿತರು ಸ್ಟಾರ್ ಆಟಗಾರರ ಬಳಿಗೆ ಹೋಗುವುದನ್ನು ನೋಡಿದಾಗ, ನಾನು ಒಬ್ಬಂಟಿಯಾಗಿದ್ದೇನೆ ಅಂದುಕೊಳ್ಳುತ್ತಿದ್ದೆ. ನಾನು ಕೂಡ ಆಟಗಾರರ ಬಳಿ ಹೋಗಲು ಪ್ರಯತ್ನಿಸಿದೆ. ಆ ಸಮಯದಲ್ಲಿ ರಾಸ್ ಟೇಲರ್ ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು. ಹಾಗಾಗಿ ನಾನು ಅವರ ಬಳಿಗೆ ಹೋಗಿ ಹೇಳಿದೆ. 'ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ ಎಂದಿದೆ. ಆಗ ಅವರು ನನಗೆ ಧನ್ಯವಾದ ಹೇಳಿದ್ದರು. ಅಂದು ಸಾಮಾನ್ಯವಾಗಿ ಆಟಗಾರರ ಬಳಿ ಬ್ಯಾಟ್ ಅಥವಾ ಗ್ಲೌಸ್‌ಗಳನ್ನು ಕೇಳುವುದು ಸಾಮಾನ್ಯವಾಗಿತ್ತು. ಆದರೆ ನಾನು ನಿಜವಾಗಿಯೂ ಅದನ್ನು ಕೇಳಲು ಬಯಸಿದ್ದರೂ ಸಹ ನಾನು ತುಂಬಾ ನಾಚಿಕೆಪಡುತ್ತಿದ್ದೆ ಎಂದು ತಮ್ಮ ನೆಚ್ಚಿನ ಆಟಗಾರನ ಬಗ್ಗೆ ಅಯ್ಯರ್ ಹೇಳಿಕೊಂಡಿದ್ದಾರೆ. ಮಾರ್ಚ್ 25 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ 2025ರ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ ತನ್ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications