ಟೀಮ್ ಇಂಡಿಯಾದ ಪರ ಹಲವು ಅನುಭವಿ ಆಟಗಾರರು ಈ ವರ್ಷ ತಂಡದ ಪರ ಅಬ್ಬರಿಸಿದ್ದಾರೆ. ಯುವ ಆಟಗಾರರು ಸಹ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ದೊಡ್ಡ ಸಾಧನೆಯ ಶಿಖರ ಏರಿದ್ದಾರೆ. ಯುವ ಆಟಗಾರರ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆದ ಆಟಗಾರ ವೈಭವ್ ಸೂರ್ಯವಂಶಿ. ಇವರು ಬಿಸಿಸಿಐ ಹಲವು ವಯೋಮಿತಿ ಕ್ರಿಕೆಟ್‌ನಲ್ಲಿ ಅಬ್ಬರಿಸಿ ಸದ್ದು ಮಾಡಿದ್ದಾರೆ.
ಕಳೆದ ವರ್ಷದ ಅಂತ್ಯದಲ್ಲಿ ವೈಭವ್ ಸೂರ್ಯವಂಶಿ ಎನ್ನುವ ಹೆಸರು ಬಹು ಚರ್ಚೆಗೆ ಗ್ರಾಸವಾಯಿತು. ಇವರಿಗೆ ಭಾರೀ ಮೊತ್ತವನ್ನು ನೀಡಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸಿಕೊಂಡಿತು. 14 ವರ್ಷದ ಯುವ ಆಟಗಾರನಿಗೆ ರಾಜಸ್ಥಾನ ಕೋಟಿ ರೂಪಾಯಿ ನೀಡಿದ್ದರಿಂದ ಎಲ್ಲರ ಗಮನ ಈ ಯುವಕನ ಮೇಲೆ ನೆಟ್ಟಿತ್ತು. ಯುವ ಪ್ಲೇಯರ್ ಸಹ ತಮ್ಮ ಮೇಲೆ ಮ್ಯಾನೇಜ್ಮೆಂಟ್ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು.

ವೈಭವ್ ಸೂರ್ಯವಂಶಿ ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಇದ್ದವು. ಈ ಪ್ರಶ್ನೆಗಳಿಗೆಲ್ಲಾ ತಾವಾಡಿದ ಮೂರನೇ ಐಪಿಎಲ್ ಪಂದ್ಯದಲ್ಲಿ ಭರ್ಜರಿಯಾಗಿ ಉತ್ತರ ನೀಡಿದ ವೈಭವ್, ಗುಜರಾತ್ ಟೈಟಾನ್ಸ್ ತಂಡದ ಬೌಲರ್‌ಗಳ ಸದ್ದಡಗಿಸಿದರು. ಐಪಿಎಲ್ ಆರಂಭವಾದ ಮೇಲೆ ಪ್ರಪಂಚವನ್ನು ನೋಡಿರುವ ವೈಭವ್, ಆಟಕ್ಕೆ ಅಭಿಮಾನಿಗಳು ಸಲಾಂ ಎಂದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಈ ಪಂದ್ಯದ ಬಳಿಕ ಇವರ ಕ್ಷಮತೆಯ ಬಗ್ಗೆ ಎಲ್ಲರಿಗೂ ತಿಳಿಯಿತು.
ಭಾರತ ತಂಡದ ಪರ ಅಂಡರ್ 19 ಕ್ರಿಕೆಟ್ ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡರು. ಅಂಡರ್ 19 ಏಷ್ಯಾ ಕಪ್ ನಲ್ಲಿ ಯುಎಇ ವಿರುದ್ಧ ಬಿರುಸಿನ ಶತಕ ಬಾರಿಸಿದ ವೈಭವ್ ಅಬ್ಬರಿಸಿದರು. ಇವರ ಈ ಅಮೋಘ ಪ್ರದರ್ಶನ ವಿಜಯ್ ಹಜಾರೆ ಟ್ರೋಫಿಯಲ್ಲೂ ಮುಂದುವರೆಯಿತು. ದೇಶೀಯ ಟೂರ್ನಿಯಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಆಡಿದ ವೈಭವ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರು ಕೇವಲ 84 ಎಸೆತಗಳಲ್ಲಿ 16 ಬೌಂಡರಿ, 15 ಸಿಕ್ಸರ್ ಸಹಾಯದಿಂದ 190 ರನ್ ಬಾರಿಸಿ ಬಿಹಾರ ತಂಡಕ್ಕೆ ಆಧಾರವಾದರು. 59 ಎಸೆತಗಳಲ್ಲಿ 150 ರನ್ ಪೂರೈಸಿದ ವೈಭವ್, ಲೀಸ್ಟ್ ಎ ಕ್ರಿಕೆಟ್‌ನಲ್ಲಿ ಎಬಿಡಿ ವಿಲಿಯರ್ಸ್ ದಾಖಲೆಯನ್ನು ಅಳಿಸಿ ಹಾಕಿದರು. ಎಬಿಡಿ 64 ಎಸೆತಗಳಲ್ಲಿ 150 ರನ್ ಬಾರಿಸಿದ್ದರು.

ವೈಭವ್ ಸೂರ್ಯವಂಶಿ ಅವರ ಅಮೋಘ ಕ್ರೀಡಾ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಇವರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಿ ಗೌರವಿಸಿದೆ. ವೈಭವ್ ಸೂರ್ಯವಂಶಿ ಭವಿಷ್ಯದ ಆಟಗಾರ ಎಂದೇ ಸದ್ಯ ಅಭಿಮಾನಿಗಳು ಹೇಳುತ್ತಿದ್ದಾರೆ. ಇವರು ಭಾರತ ಅಂಡರ್ 19 ತಂಡದ ಖಾಯಂ ಸದಸ್ಯ. ಇವರು ಅಂಡರ್ 19 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.