19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡಗಳು ಕಾದಾಟ ನಡೆಸಿದವು. ಈ ವೇಳೆ ಆರ್‌ಸಿಬಿ ಪರ ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರು ಪದಾರ್ಪಣೆ ಮಾಡಿದರು. ಅದರಲ್ಲಿ ಒಬ್ಬರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ ಜೇಕಬ್ ಡಫಿ, ಇನ್ನೊಬ್ಬರು ಯುವ ಆಟಗಾರ ಅಭಿನಂದನ್ ಸಿಂಗ್.
ಆರ್‌ಸಿಬಿ ತಂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅಭಿನಂದನ್ ಸಿಂಗ್ ಅವರನ್ನು ಸೇರಿಸಿಕೊಳ್ಳುವ ಮುನ್ನ ಹಲವು ಅಭಿಮಾನಿಗಳಿಗೆ ಇವರ ಹೆಸರು ತಿಳಿದಿರಲಿಲ್ಲ. ಆದರೆ ಆರ್‌ಸಿಬಿ ಪರ ಕಣಕ್ಕೆ ಇಳಿಯುತ್ತಲೇ ಇವರ ಬಗ್ಗೆ ಹುಡುಕುವುದು ಹೆಚ್ಚಾಗಿದೆ. ಯಾರು ಈ ಅಭಿನಂದನ್ ಸಿಂಗ್ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

ಉತ್ತರ ಪ್ರದೇಶದ ಪ್ರತಿಭಾವಂತ ಬೌಲರ್ ಅಭಿನಂದನ್ ಸಿಂಗ್, ಯುಪಿಎಸ್‌ಸಿ ಕನಸು ಹೊತ್ತು ಊರು ಬಿಟ್ಟು ದೆಹಲಿ ಸೇರಿದ ಯುವಕ. ದೆಹಲಿಯಲ್ಲಿ ಜೀವನ ಸಾಗಿಸಲು ಟ್ಯೂಷನ್ ನಡೆಸಿದ ಸಾಧಕ ಅಭಿನಂದನ್ ಸಿಂಗ್. ದೆಹಲಿಯಲ್ಲಿ ಉಳಿಯಲು ಮತ್ತು ಕ್ರಿಕೆಟ್ ಕೋಚಿಂಗ್ ಫೀಸ್ ಕಟ್ಟಲು ಹಣದ ಅಗತ್ಯವಿತ್ತು. ಇದಕ್ಕಾಗಿ ಅಭಿನಂದನ್ ಪಟ್ಟ ಕಷ್ಟ ಪಟ್ಟರು. ಹಗಲಿನಲ್ಲಿ ಕಠಿಣ ಅಭ್ಯಾಸ, ಸಂಜೆ ವೇಳೆ ಮಕ್ಕಳಿಗೆ ಟ್ಯೂಷನ್ ಹೇಳುತ್ತಾ ಬಂದ ಹಣದಲ್ಲಿ ತಮ್ಮ ಕ್ರಿಕೆಟ್ ಬದುಕನ್ನು ರೂಪಿಸಿಕೊಂಡ ಸಾಧಕ.

ಅಭಿನಂದನ್ ಸಿಂಗ್ ಅವರಿಗೆ ಐಪಿಎಲ್ ಡ್ರೀಮ್ ಡೆಬ್ಯೂ ಆಗದೇ ಇರಬಹುದು ಆದರೆ ನೆನಪಿನಲ್ಲಿಟ್ಟುಕೊಳ್ಳುವಂತೆ ಆಯಿತು. ಇವರು ತಮ್ಮ ಮೊದಲ ಪಂದ್ಯದಲ್ಲಿ ಎದುರಾಳಿ ನಾಯಕ ಇಶಾನ್ ಕಿಶನ್ ಅವರ ವಿಕೆಟ್ ಪಡೆದು ಬೀಗಿದರು.
ಅಭಿನಂದನ್ ಅವರ ಎಸೆತದಲ್ಲಿ ಇಶಾನ್ ಕಿಶನ್ ಡೀಪ್ ಪಾಯಿಂಟ್ ಮೇಲೆ ಸಿಕ್ಸರ್ ಬಾರಿಸಲು ಮುಂದಾಗಿದ್ದರು. ಆದರೆ ಅಲ್ಲಿ ಫೀಲ್ಡ್ ಮಾಡುತ್ತಿದ್ದ ಗನ್ ಫೀಲ್ಡರ್ ಫಿಲ್ ಸಾಲ್ಟ್ ಹಿಡಿದ ಅಮೋಘ ಕ್ಯಾಚ್‌ಗೆ ಇವರು ಬಲಿಯಾದರು. ಈ ವಿಕೆಟ್ ಅಭಿನಂದನ್ ಸಿಂಗ್ ಅವರಿಗಿಂತ ಫಿಲ್ ಸಾಲ್ಟ್ ಅವರದ್ದು ಎಂದು ಹೇಳಬಹುದು. ಏನೇ ಆಗಲಿ ಅಭಿನಂದನ್ ತಮ್ಮ ಮೊದಲ ಪಂದ್ಯದಲ್ಲೇ ವಿಕೆಟ್ ಪಡೆದು ಬೀಗಿದರು.
ಅಭಿನಂದನ್ ದೆಹಲಿಯಲ್ಲಿ ಕೋಚ್ ರಣಧೀರ್ ಸಿಂಗ್ ಅವರಲ್ಲಿ ಅಭ್ಯಾಸ ಮಾಡಿದ್ದಾರೆ. ಅಂದಹಾಗೆ ಈ ರಣಧೀರ್ ಸಿಂಗ್ ನಡೆಸುವ ಮದ್ರಾಸ್ ಕ್ಲಬ್ ನಿಂದಲೇ ಯುಜಿ ಚಾಹಲ್ ಮತ್ತು ಪವನ್ ನೇಗಿ ಅವರಂತಹ ಆಟಗಾರರು ಐಪಿಎಲ್ ವೇದಿಕೆಯಲ್ಲಿ ಆಡಲು ಆಗಿದ್ದು. ಅಷ್ಟೇ ಏಕೆ ಆರ್‌ಸಿಬಿ ತಂಡದಲ್ಲಿ ಸುಯಶ್ ಶರ್ಮಾ ಸಹ ಇದೇ ಕ್ಲಬ್ ನವರೇ. ಈಗ ಈ ಕ್ಲಬ್ ಮೈಲಿಗಲ್ಲು ಮತ್ತು ಮುಂದಕ್ಕೆ ಸಾಗಿದೆ. ಇವರನ್ನು ಎಸ್‌ಆರ್‌ಎಚ್ 2024ರಲ್ಲಿ ತಂಡದಲ್ಲಿ ಸೇರಿಸಿಕೊಂಡಿತ್ತು. ಆದರೆ ಆಡುವ ಅವಕಾಶ ಲಭಿಸಿರಲಿಲ್ಲ.

ಸ್ಟಾರ್ ಆಟಗಾರರನ್ನೇ ಹೊಂದಿರುವ ಆರ್‌ಸಿಬಿ ತಂಡದಲ್ಲಿ ಇವರು ಪದಾರ್ಪಣೆ ಮಾಡುವುದು ಸುಲಭವಾಗಿರಲಿಲ್ಲ. ಆದರೆ ಈ ಕನಸು ಈಗ ಸಾಕಾರವಾಗಿದೆ. 28 ವರ್ಷದ ಯುವ ಬೌಲರ್ ಎಷ್ಟೇ ಕಷ್ಟ ಬಂದರೂ ಸಹ ಕನಸು ಕಾಣುವುದನ್ನು ಬಿಡಲಿಲ್ಲ ಎಂದು ಕೋಚ್ ರಣಧೀರ್ ಸಿಂಗ್ ನೆನಪಿಸಿಕೊಳ್ಳುತ್ತಾರೆ.
ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ ಅಭಿನಂದನ್ ಸಿಂಗ್ ಬಗ್ಗೆ ಕೋಚ್ ರಣಧೀರ್ ಸಿಂಗ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಭಿನಂದನ್ ಒಬ್ಬ ಪ್ರತಿಭಾವಂತ ಬೌಲರ್. ಇವರು ಬಿಸಿಸಿಐ ಅಡಿಯಲ್ಲಿ ಯಾವುದೇ ಟೂರ್ನಿಯನ್ನು ಆಡಿಲ್ಲ. ಆದರೂ ಸಹ ಮದ್ರಾಸ್ ಕ್ಲಬ್ ಪರ ನಿರಂತರವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದರು. ಅಲ್ಲದೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದರು. ಅವರ ಹೈ-ಆರ್ಮ್ ಬಿಡುಗಡೆಯು ಅವರಿಗೆ ಹೆಚ್ಚುವರಿ ಬೌನ್ಸ್ ಅನ್ನು ನೀಡುತ್ತದೆ. ಇದು ಭಾರತದಂತಹ ಪಿಚ್‌ಗಳಲ್ಲಿ ಬೌಲಿಂಗ್ ಮಾಡಲು ನೆರವಾಗುತ್ತದೆ ಎಂದು ಕೋಚ್ ತಿಳಿಸಿದ್ದಾರೆ.