
ಟೆಸ್ಟ್ ವೃತ್ತಿ ಬದುಕಿನಲ್ಲಿ 100ನೇ ಪಂದ್ಯವಾಡುತ್ತಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ತಮ್ಮ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಭಾರತ ವಿರುದ್ಧ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 100 ರನ್ ಗಡಿ ದಾಟಿ ಸಾಧಕರ ಪಟ್ಟಿಗೆ ಸೇರಿದ್ದಾರೆ.
30 ವರ್ಷ ವಯಸ್ಸಿನ ರೂಟ್ ಅವರು 100ನೇ ಪಂದ್ಯವಾಡುತ್ತಿರುವ 15ನೇ ಇಂಗ್ಲೆಂಡ್ ಆಟಗಾರ ಎನಿಸಿಕೊಂಡಿದ್ದು, 100ನೇ ಪಂದ್ಯದಲ್ಲಿ 100ರನ್ ಗಳಿಸಿದ ವಿಶ್ವದ 9ನೇ ಆಟಗಾರರಾಗಿದ್ದಾರೆ. ಇಂಗ್ಲೆಂಡ್ ಪರ ಅತ್ಯಧಿಕ ರನ್ ಗಳಿಸಿರುವ ಆಟಗಾರರ ಪೈಕಿ ಸರ್ ಅಲೆಸ್ಟರ್ ಕುಕ್, ಗ್ರಹಾಂ ಗೂಚ್ ಹಾಗೂ ಅಲೆಕ್ ಸ್ಟುವರ್ಟ್ ನಂತರದ ಸ್ಥಾನದಲ್ಲಿದ್ದಾರೆ.
ಭಾರತ ವಿರುದ್ಧ ಚೆನ್ನೈನ ಮೊದಲ ಟೆಸ್ಟ್ ಪಂದ್ಯದಲ್ಲಿ 100ರನ್ ಗಳಿಸಿ ತಮ್ಮ ವೃತ್ತಿ ಬದುಕಿನ 20ನೇ ಶತಕ ಪೂರೈಸಿದರು. 164ಎಸೆತಗಳಲ್ಲಿ 100ರನ್ ಗಳಿಸಿದ್ದಾಗ ಇಂಗ್ಲೆಂಡ್ ಮೊತ್ತ 227/2 ಆಗಿತ್ತು. ಇನ್ನೊಂದು ತುದಿಯಲ್ಲಿ ಸಿಬ್ಲಿ 83 ರನ್ ಗಳಿಸಿದ್ದರು.
2021ರಲ್ಲಿ ಉತ್ತಮ ಲಯದಲ್ಲಿರುವ ರೂಟ್ ಅವರು ಶ್ರೀಲಂಕಾ ವಿರುದ್ಧ ಎರಡು ಹಾಗೂ ಈ ಪಂದ್ಯದಲ್ಲಿ ಶತಕ ಬಾರಿಸಿ ಸತತ 3 ಟೆಸ್ಟ್ ಗಳಲ್ಲಿ 3 ಶತಕ ಗಳಿಸಿದ್ದಾರೆ.
ಜೋ ರೂಟ್ ಭಾರತ ವಿರುದ್ಧ 17 ಪಂದ್ಯಗಳನ್ನಾಡಿದ್ದು, 5 ಶತಕ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ 10 ಪಂದ್ಯಗಳಿಂದ 4, ಆಸ್ಟ್ರೇಲಿಯಾ ವಿರುದ್ಧ 24 ಪಂದ್ಯಗಳಿಂದ 3, ವೆಸ್ಟ್ ಇಂಡೀಸ್ ವಿರುದ್ಧ 11 ಪಂದ್ಯಗಳಿಂದ 3 ಶತಕ ಗಳಿಸಿದ್ದಾರೆ.
100ನೇ ಟೆಸ್ಟ್ ಪಂದ್ಯದಲ್ಲಿ 100ರನ್ ಗಡಿ ದಾಟಿದ ಕ್ರಿಕೆಟರ್ಸ್
104: ಕಾಲಿನ್ ಕೌಡ್ರೆ(ಇಂಗ್ಲೆಂಡ್) v/s ಆಸ್ಟ್ರೇಲಿಯಾ, ಬರ್ಮಿಂಗ್ ಹ್ಯಾಮ್, 1968
145 : ಜಾವೇದ್ ಮಿಯಾಂದಾದ್(ಪಾಕಿಸ್ತಾನ) v/s ಭಾರತ, ಲಾಹೋರ್, 1989
149 : ಗಾರ್ಡನ್ ಗ್ರೀನಿಡ್ಜ್(ವೆಸ್ಟ್ ಇಂಡೀಸ್) v/s ಇಂಗ್ಲೆಂಡ್, ಸೈಂಟ್ ಜಾನ್ಸ್(ಆಂಟಿಗಾ), 1990
105: ಅಲೆಕ್ ಸ್ಟುವರ್ಟ್(ಇಂಗ್ಲೆಂಡ್) v/s ವೆಸ್ಟ್ ಇಂಡೀಸ್, ಮ್ಯಾಂಚೆಸ್ಟರ್, 2000
184 :ಇನ್ಜಾಮಾಮ್ ಉಲ್ ಹಕ್(ಪಾಕಿಸ್ತಾನ) v/s ಭಾರತ, ಬೆಂಗಳೂರು, 2005
120 : ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) v/s ದಕ್ಷಿಣ ಆಫ್ರಿಕಾ, ಸಿಡ್ನಿ, 2006
143 ಅಜೇಯ: ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) v/s ದಕ್ಷಿಣ ಆಫ್ರಿಕಾ, ಸಿಡ್ನಿ, 2006
131: ಗ್ರಹಾಂ ಸ್ಮಿತ್ (ದಕ್ಷಿಣ ಆಫ್ರಿಕಾ) v/s ಇಂಗ್ಲೆಂಡ್, ಜೋಹಾನ್ಸ್ ಬರ್ಗ್, 2012
134: ಹಶೀಂ ಅಮ್ಲಾ (ದಕ್ಷಿಣ ಆಫ್ರಿಕಾ) v/s ಶ್ರೀಲಂಕಾ, ಜೋಹಾನ್ಸ್ ಬರ್ಗ್, 2017
113*: ಜೋ ರೂಟ್ (ಇಂಗ್ಲೆಂಡ್) v/s ಭಾರತ, ಚೆನ್ನೈ, 2021
ಗಮನಿಸಿ: ರಿಕಿ ಪಾಂಟಿಂಗ್ ಮಾತ್ರ 100ನೇ ಪಂದ್ಯದ ಎರಡು ಇನ್ನಿಂಗ್ಸ್ ನಲ್ಲೂ ಶತಕ ಗಳಿಸಿರುವ ಏಕೈಕ ಆಟಗಾರ.