ಬ್ರಿಸ್ಬೇನ್‌ನ ಗಬ್ಬಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಗಬ್ಬಾ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 445 ರನ್ ಗಳಿಸಿತ್ತು. ಆಸ್ಟ್ರೇಲಿಯಾದ ಮುನ್ನಡೆಯನ್ನು ಕೊನೆಗೊಳಿಸಲು ಭಾರತಕ್ಕೆ ಇನ್ನೂ 394 ರನ್‌ಗಳು ಮತ್ತು ಫಾಲೋ-ಆನ್ ತಪ್ಪಿಸಲು 194 ರನ್‌ಗಳ ಅಗತ್ಯವಿದೆ. ಆದರೆ, ಮುಂದಿನ ಎರಡು ದಿನಗಳಲ್ಲಿ ಬ್ರಿಸ್ಬೇನ್‌ನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಭಾರತ ತಂಡದ ಪರ ಕೆಎಲ್ ರಾಹುಲ್ 33 ಹಾಗೂ ನಾಯಕ ರೋಹಿತ್ ಶರ್ಮಾ ಖಾತೆ ತೆರೆಯದೆ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2, ಜೋಶ್ ಹ್ಯಾಜಲ್‌ವುಡ್ ಮತ್ತು ಪ್ಯಾಟ್ ಕಮಿನ್ಸ್ ತಲಾ ಒಂದು ವಿಕೆಟ್ ಪಡೆದರು. ಮೂರನೇ ದಿನದ ಆಟದ ನಂತರ ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಜಸ್ಪ್ರೀತ್ ಬುಮ್ರಾ ಅವರು ಕೆಲವು ಪ್ರಮುಖ ವಿಷಯಗಳ ಬಗ್ಗೆ ಬಹಿರಂಗವಾಗಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಸ್ಪ್ರೀತ್ ಬುಮ್ರಾ, 'ಒಂದು ತಂಡವಾಗಿ, ನಾವು ಒಬ್ಬರಿಗೊಬ್ಬರು ಬೆರಳು ತೋರಿಸುವುದಿಲ್ಲ. ನಾವು ಆ ಮನಸ್ಥಿತಿಗೆ ಬರಲು ಬಯಸುವುದಿಲ್ಲ. ಪಂದ್ಯದ ಸಂದರ್ಭದಲ್ಲಿ ನೀವು ಏನು ಮಾಡಬೇಕು ಎಂದು ಪರಸ್ಪರ ಬೆರಳುಗಳನ್ನು ತೋರಿಸಿ ಮಾತನಾಡುವುದಿಲ್ಲ. ನಾವು ತಂಡವಾಗಿ ಬದಲಾವಣೆಯ ಅವಧಿಯನ್ನು ಎದುರಿಸುತ್ತಿದ್ದೇವೆ. ಏಕೆಂದರೆ ತಂಡಕ್ಕೆ ಹೊಸ ಆಟಗಾರರು ಬರುತ್ತಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಕ್ರಿಕೆಟ್ ಆಡುವುದು ಸುಲಭವಲ್ಲ ಎಂದಿದ್ದಾರೆ.
ಅನನುಭವಿ ಬೌಲರ್‌ಗಳು ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡುವುದು ಕಷ್ಟ. ವೇಗದ ಬೌಲರ್‌ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷಿತ್ ರಾಣಾ ಪ್ರಸಕ್ತ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಆಕಾಶ್ ದೀಪ್ ತಮ್ಮ ಮೊದಲ ವಿದೇಶಿ ಪ್ರವಾಸದಲ್ಲಿದ್ದಾರೆ. ಸಹಾ ಬೌಲರ್‌ಗಳಿಗೆ ಸಹಾಯ ಮಾಡುವುದು ನನ್ನ ಕೆಲಸ. ನಾನು ಅವರಿಗಿಂತ ಸ್ವಲ್ಪ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಆದ್ದರಿಂದ ನಾನು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ಹೊಸ ಆಟಗಾರರು ತಂಡಕ್ಕೆ ಬಂದಿದ್ದಾರೆ. ನಾವು ಅವರನ್ನು ಪರಿಗಣಿಸಿ ಅನುಭವದಿಂದ ಅವರು ಕಲಿಯಲು ಅಗತ್ಯವಿರುವ ಬೆಂಬಲವನ್ನು ನೀಡಬೇಕು ಎಂದು ತಂಡದ ಸಮತೋಲನದ ಬಗ್ಗೆ ಬುಮ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.