ಮಾನವೀಯ ಮುಖದಿಂದ ಅಭಿಮಾನಿಗಳ ಮನಗೆದ್ದ ಬಂಗಾಳ ಹುಲಿ ಗಂಗೂಲಿ!

ನವದೆಹಲಿ, ಜನವರಿ 21: ಲಂಡನ್‌ನ ಲಾರ್ಡ್ ಸ್ಟೇಡಿಯಂನಲ್ಲಿ 2002ರಲ್ಲಿ ನಡೆದಿದ್ದ ಭಾರತ-ಇಂಗ್ಲೆಂಡ್ ನಡುವಿನ ನ್ಯಾಟ್‌ವೆಸ್ಟ್ ಸರಣಿಯನ್ನು ಭಾರತ ಗೆದ್ದಾಗ ಆಗಿನ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಅಂಗಿ ಕಳಚಿ ಸಂಭ್ರಮಾಚರಿಸಿದ್ದರು. ಗಂಗೂಲಿ ಅಂದ ಕೂಡಲೇ ಕ್ರೀಡಾಭಿಮಾನಿಗಳ ಕಣ್ಣ ಮುಂದೆ ಇದೇ ಚಿತ್ರ ಬರೋದಿದೆ. ಅದೇ ಗಂಗೂಲಿ ಈಗ ಮಾನವೀಯ ಮುಖದಿಂದ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ, ದೇಸಿ ಕ್ರಿಕೆಟ್‌ನಲ್ಲಿ ಬರೋಡಾ ತಂಡದ ನಾಯಕರೂ ಆಗಿದ್ದ ಜೇಕಬ್ ಮಾರ್ಟಿನ್ ಅವರಿಗೆ ಬಂಗಾಳ ಹುಲಿ ಖ್ಯಾತಿಯ ಗಂಗೂಲಿ ಹಾರ್ದಿಕ ನೆರವು ನೀಡಿದ್ದಾರೆ. ಅಪಘಾತಕ್ಕೆ ತುತ್ತಾಗಿದ್ದ ಜೇಕಬ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತ ತಂಡ ಮತ್ತು ಕ್ರಿಕೆಟ್ ಆಟಗಾರರ ಬಗ್ಗೆ ಕಾಳಜಿ ವಹಿಸುವ ಪ್ರೀತಿಯ ಆಟಗಾರ ಸೌರವ್. ಗಾಡ್ ಆಫ್ ಆಫ್‌ಸೈಡ್ ಬಿರುದೂ ಪಡೆದಿದ್ದ ದಾದಾ ಅವರು ಇತ್ತೀಚೆಗೆ ಬಿಸಿಸಿಐನಿಂದ ಅಮಾನತಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಬಗ್ಗೆಯೂ ಕಳಕಳಿ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾರ್ಟಿನ್‌ಗೆ ಗಂಭೀರ ಗಾಯ
2018ರ ಡಿಸೆಂಬರ್ 28ರಂದು ಮಾರ್ಟಿನ್ ಅಪಘಾತಕ್ಕೀಡಾಗಿದ್ದರು. ಅವರಿಗೆ ಗಂಭೀರ ಗಾಯಗಳಾಗಿತ್ತು. ಈಗಲೂ ಗಂಭೀರ ಸ್ಥಿತಿಯಲ್ಲೇ ಇರುವ ಜೇಕಬ್‌ಗೆ ಹೆಚ್ಚಿನ ಚಿಕಿತ್ಸೆಗೆ ಆರ್ಧಿಕ ನೆರವು ಬೇಕಿತ್ತು. ಭಾರತದ ಆಟಗಾರ ಅಸಹಾಯಕ ಸ್ಥಿತಿಯನ್ನು ಮನಗಂಡ ಗಂಗೂಲಿ ನೆರವಿಗೆ ಮುಂದಾಗುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಇನ್ನೂ ಹತ್ತಿರವಾಗಿದ್ದಾರೆ.

ನಾನೂ ಜೊತೆಗಿದ್ದೇನೆ
'ಮಾರ್ಟಿನ್ ಮತ್ತು ನಾನು ಒಂದೊಮ್ಮೆ ಒಂದೇ ತಂಡದಲ್ಲಿದ್ದೆವು; ಇಷ್ಟೇ ನನಗೆ ನೆನಪಿದೆ. ಅವರು ಬೇಗ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಾರ್ಟಿನ್ ಕುಟುಂಬಕ್ಕೆ ಧೈರ್ಯ ತುಂಬಲು, ನಾನೂ ಅವರ ಜೊತೆಯಿದ್ದೇನೆ ಎಂದು ತಿಳಿಸಬಯಸುತ್ತೇನೆ' ಎಂದು ದೊಡ್ಡ ಮನಸ್ಸಿನ ದಾದಾ 'ಟೆಲಿಗ್ರಾಫ್' ಜೊತೆ ಹೇಳಿಕೊಂಡಿದ್ದಾರೆ.

ನೆರವಿಗೆ ನಿಂತ ಟೀಮ್ ಇಂಡಿಯಾ
ಟೆಲಿಗ್ರಾಫ್‌ನಲ್ಲಿ ವರದಿಯಾಗಿರುವಂತೆ ಜೇಕಬ್ ಅವರ ಪ್ರತಿ ದಿನದ ಚಿಕಿತ್ಸೆ ಸುಮಾರು 70,000 ರೂ.ಗಳನ್ನು ಬೇಡುತ್ತೆ. ಹೀಗಾಗಿ ಗಂಗೂಲಿ ಪತ್ನಿ ಡೋನಾ ರಾಯ್ ಕೂಡ ಬಿಸಿಸಿಐನಿಂದ ನೆರವಿಗೆ ಯತ್ನಿಸಿದ್ದಾರಲ್ಲದೆ, ಜೇಕಬ್‌ಗೆ ಬಿಸಿಸಿಯಿಂದ 5 ಲಕ್ಷ ರೂ.ಗಳ ನೆರವು ದೊರಕಿಸಿದ್ದಾರೆ. ಇದರ ಜೊತೆಗೆ ಮಾಜಿ ವೇಗಿ ಜಹೀರ್ ಖಾನ್, ಇರ್ಫಾನ್ ಪಠಾಣ್, ಯುಸೂಫ್ ಪಠಾಣ್, ಮುನಾಫ್ ಪಟೇಲ್, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಕ್ರಿಕೆಟ್ ದಿಗ್ಗಜರು ಸಹಾಯಹಸ್ತ ನೀಡಿದ್ದಾರೆ.

ಹಾರ್ದಿಕ್-ರಾಹುಲ್ ಪರ ಬ್ಯಾಟಿಂಗ್
ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಅಮಾನತಾಗಿದ್ದ ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಬಗ್ಗೆ ಗಂಗೂಲಿ ಕಾಳಜಿ ತೋರಿಸಿದ್ದರು. ಮನುಷ್ಯರಾದವರು ತಪ್ಪು ಮಾಡುತ್ತಾರೆ. ಅದನ್ನು ಕ್ಷಮಿಸಿ ಯುವ ಆಟಗಾರರ ಭವಿಷ್ಯಕ್ಕೆ ಪ್ರೋತ್ಸಾಹಿಸುವುದರಲ್ಲಿ ಅರ್ಥವಿದೆ ಎಂದು ಗಂಗೂಲಿ ಹೇಳಿಕೆ ನೀಡಿದ್ದರು. ಪ್ರತಿಭಾನ್ವಿತ ಆಟಗಾರರು ತಂಡದಿಂದ ಹೊರಗುಳಿದರೆ ತಂಡಕ್ಕೂ ಅದರಿಂದ ಹಿನ್ನಡೆಯಾಗುವ ಕಳವಳ ಗಂಗೂಲಿ ಮಾತಿನಲ್ಲಿ ವ್ಯಕ್ತವಾಗಿರುವುದನ್ನು ನಾವಿಲ್ಲಿ ಗಮನಿಸಿಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications