ಇದಕ್ಕಿಂತ ಹೆಚ್ಚು ಇನ್ನೇನು ಸಾಧಿಸಲು ಸಾಧ್ಯ: ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ ಬಗ್ಗೆ ಗಂಭೀರ್ ಭಾರೀ ಪ್ರಶಂಸೆ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಐಆದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಆದರೆ ದೆಹಲಿ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಸರಾಗವಾಗಿ ಬ್ಯಾಟಿಂಗ್ ನಡೆಸಿದ್ದು ಆತ್ಮವಿಶ್ವಾಸದಿಂದ ಕಾಣಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್‌ಗಳಿಸಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 20 ರನ್‌ಗಳಿಸಿದ್ದರು.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್‌ಗಳ ವಿರುದ್ಧ ಭರ್ಜರಿಯಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗುವ ಮೂಲಕ ಇನ್ನಿಂಗ್ಸ್ ಅಂತ್ಯಗೊಳಿಸಿದ್ದರು. ಹಾಗಿದ್ದರೂ ವಿರಾಟ್ ಕೊಹ್ಲಿ ದೆಹಲಿ ಟೆಸ್ಟ್‌ನಲ್ಲಿ ಆಡಿದ ರೀತಿಗೆ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಗೌತಮ್ ಗಂಭೀರ್ ಮೊದಲಾದ ಆಟಗಾರರ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ರನ್‌ಗಳ ಮೈಲಿಗಲ್ಲು ದಾಟಿದ್ದು ಈ ವಿಚಾರವಾಗಿ ಮಾಜಿ ಕ್ರಿಕೆಟಿಗ
ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಎಲ್ಲಾ ವಾತಾವರಣದಲ್ಲೂ ಯಶಸ್ಸು ಗಳಿಸಿರುವ ಆಟಗಾರ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 25000 ರನ್ ಗಳಿಸಿದ ದಾಖಲೆಯನ್ನು ಸದ್ಯ ವಿರಾಟ್ ಕೊಹ್ಲಿ ಹೊಂದಿದ್ದು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿದಿದ್ದಾರೆ. ವಿರಾಟ್ ಕೊಹ್ಲಿ ಅವರ ಈ ವಿಶೇಷ ಸಾಧನೆಯ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, ಎಲ್ಲಾ ಪರಿಸ್ಥಿತಿಯಲ್ಲೂ, ಎಲ್ಲಾ ವಾತಾವರಣದಲ್ಲಿಯೂ ವಿರಾಟ್ ಕೊಹ್ಲಿ ಯಶಸ್ಸು ಸಾಧಿಸಿದ್ದಾರೆ ಎಂದಿದ್ದು ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಆಟಗಾರ ಎಂದಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ರನ್‌ಗಳನ್ನು ಗಳಿಸುವುದು ತಮಾಷೆಯಲ್ಲ ಎಂದು ಕೂಡ ಉಲ್ಲೇಖಿಸಿದ್ದಾರೆ ಗಂಭೀರ್.
ಇದಕ್ಕಿಂತ ಹೆಚ್ಚು ಇನ್ನೇನು ಸಾಧ್ಯ
"ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಪಟ್ಟಿಯ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಆದರೆ ವಿರಾಟ್ ಕೊಹ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಒಂದೇ ರೀತಿಯಾಗಿ ಆಡಿದ್ದಾರೆ. ಉಪಖಂಡದ ರಾಷ್ಟ್ರಗಳಲ್ಲಿಯೂ ಅವರ ಅಂಕಿಅಂಶಗಳನ್ನು ನೀವು ಹೋಲಿಕೆ ಮಾಡಬಹುದು. ಕೊಹ್ಲಿ ಏಕದಿನ ಮಾದರಿಯಲ್ಲಿ ಅತ್ಯುತ್ತಮ ಆಟಗಾರ, ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಅವರು 27 ಶತಕ ಹಾಗೂ 28 ಅರ್ಧಶತಕಗಳನ್ನು ಹೊಂದಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್‌ಗಳಲ್ಲಿ ಶತಕಗಳನ್ನು ದಾಖಲಿಸಿದ್ದಾರೆ. ಇದಕ್ಕಿಂತ ಹೆಚ್ಚಿನದಾಗಿ ಇನ್ನೇನು ಸಾಧಿಸಲು ಸಾಧ್ಯ" ಎಂದಿದ್ದಾರೆ ಗೌತಮ್ ಗಂಭೀರ್.
ಈ ಸಾಧನೆ ತಮಾಷೆಯೇ ಅಲ್ಲ
25000 ರನ್‌ಗಳನ್ನು ಗಳಿಸುವುದು ತಮಾಷೆಯೇ ಅಲ್ಲ. ಅವರು ಸಾಕಷ್ಟು ಏರಿಳಿತಗಳನ್ನು ನೋಡಿದ್ದಾರೆ. ಹಾಗಿದ್ದರೂ ಸ್ಥಿರವಾಗಿಯೇ ಪ್ರದರ್ಶನ ನೀಡಿದ್ದಾರೆ. ನಿಮ್ಮ ಆಟದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ನಿಮ್ಮ ನಿಲ್ಲುವ ಭಂಗಿ ಬದಲಾಗುತ್ತದೆ, ತಾಂತ್ರಿಕವಾಗಿ ಬದಲಾವಣೆಯಾಗುತ್ತದೆ, ಬಲ ಹಾಗೂ ದೌರ್ಬಲ್ಯಗಳಲ್ಲಿ ಬದಲಾವಣೆಯಾಗುತ್ತದೆ, ಔಟಾಗುವ ವಿಧಾನಗಳು ಬದಲಾಗುತ್ತದೆ. ಭಾವನೆಗಳಲ್ಲಿ ಬದಲಾವಣೆಗಳಾಗುತ್ತದೆ. ಈ ಎಲ್ಲಾ ವಿಚಾರಗಳಲ್ಲಿಯೂ ನಿಯಂತ್ರಣ ಸಾಧಿಸಿಕೊಂಡು ಇಷ್ಟು ರನ್‌ಗಳನ್ನು ಗಳಿಸಿದರೆ ನೀವು ನಿಜವಾಗಿಯೂ ಶ್ರೇಷ್ಠ ಆಟಗಾರ" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications