ಗೌತಮ್ ಗಂಭೀರ್ ಮುಖ್ಯ ಕೋಚ್; ಭಾರತ ತಂಡದ ಸಹಾಯಕ ಕೋಚಿಂಗ್ ಸಿಬ್ಬಂದಿ ಯಾರಾಗಲಿದ್ದಾರೆ?
ಮಂಗಳವಾರ, ಜುಲೈ 9ರಂದು ಭಾರತ ಹಿರಿಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಿಸಿದೆ.
ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜ್ಪೆ ಮತ್ತು ಶ್ರೀಮತಿ ಸುಲಕ್ಷಣಾ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಗೌತಮ್ ಗಂಭೀರ್ ಅವರನ್ನು ರಾಹುಲ್ ದ್ರಾವಿಡ್ ಅವರಿಂದ ತೆರವಾದ ಸ್ಥಾನಕ್ಕೆ ಸರ್ವಾನುಮತದಿಂದ ಶಿಫಾರಸ್ಸು ಮಾಡಿತು.

"ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಪಾತ್ರದಲ್ಲಿ ಬಿಸಿಸಿಐ ಸ್ವಾಗತಿಸುತ್ತದೆ. ಮಾಜಿ ಭಾರತೀಯ ಆರಂಭಿಕ ಬ್ಯಾಟರ್ ತನ್ನೊಂದಿಗೆ ಅನುಭವದ ಸಂಪತ್ತು ಮತ್ತು ಆಟದ ಬಗ್ಗೆ ಆಳವಾದ ತಿಳುವಳಿಕೆಯನ್ನು ತರುತ್ತಾನೆ. ತಮ್ಮ ಅಸಾಧಾರಣ ಬ್ಯಾಟಿಂಗ್ ಪರಾಕ್ರಮ ಮತ್ತು ಕಾರ್ಯತಂತ್ರದ ಕುಶಾಗ್ರಮತಿಗೆ ಹೆಸರುವಾಸಿಯಾದ ಗಂಭೀರ್ ಭಾರತೀಯ ಕ್ರಿಕೆಟ್‌ನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ," ಎಂದು ಬಿಸಿಸಿಐ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬರೆದುಕೊಂಡಿದೆ.
ಇದೇ ಜುಲೈ 27ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಸರಣಿಯಿಂದ ಗೌತಮ್ ಗಂಭೀರ್ ತಮ್ಮ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇನ್ನು 42ರ ವರ್ಷದ ಗಂಭೀರ್‌ಗೆ ತಮ್ಮದೇ ಕೋಚಿಂಗ್ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಬಿಸಿಸಿಐ ನೀಡಿದೆ.
ರಾಹುಲ್ ದ್ರಾವಿಡ್ ಅವರ ಅವಧಿಯಲ್ಲಿ ಪಾರಸ್ ಮಾಂಬ್ರೆ (ಬೌಲಿಂಗ್ ಕೋಚ್), ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಮತ್ತು ವಿಕ್ರಮ್ ರಾಥೋರ್ (ಬ್ಯಾಟಿಂಗ್ ಕೋಚ್) ಸಹಾಯಕ ಸಿಬ್ಬಂದಿಯಾಗಿದ್ದರು.
ಗೌತಮ್ ಗಂಭೀರ್ ಮುಖ್ಯ ಕೋಚ್ ನೇಮಕಾತಿಯ ನಂತರ, ಭಾರತ ತಂಡದಲ್ಲಿ ಅವರ ಸಹಾಯಕರಾಗಿ ಸೇರಬಹುದಾದ ಮೂರು ಹೆಸರುಗಳು ಇಲ್ಲಿವೆ.
ಅಭಿಷೇಕ್ ನಾಯರ್ - ಬ್ಯಾಟಿಂಗ್ ಕೋಚ್
ಭಾರತ ತಂಡದ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಅಭಿಷೇಕ್ ನಾಯರ್ ಎಂಬ ಹೆಸರು ಕೆಲ ದಿನಗಳಿಂದ ಸದ್ದು ಮಾಡುತ್ತಿದೆ. ಐಪಿಎಲ್ 2024ರ ಸಮಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಗೌತಮ್ ಗಂಭೀರ್ ಮತ್ತು ಅಭಿಷೇಕ್ ನಾಯರ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಗಂಭೀರ್ ಮತ್ತು ನಾಯರ್ ಈಗಾಗಲೇ ಮೌಖಿಕ ಒಪ್ಪಂದ ಮಾಡಿಕೊಂಡಿದ್ದು, ಮುಂಬೈ ಮಾಜಿ ಆಟಗಾರ ಭಾರತ ತಂಡದಲ್ಲಿ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಸೇರಿಕೊಳ್ಳಬಹುದು ಎಂದು ವರದಿಗಳು ತಿಳಿಸಿವೆ.
ಅಭಿಷೇಕ್ ನಾಯರ್ ಅವರು ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಅವರಿಗೆ ಮಾರ್ಗದರ್ಶಕರಾಗಿದ್ದಾರೆ ಮತ್ತು ಯುವ ಆಟಗಾರರಲ್ಲಿ ಹೆಚ್ಚು ಗೌರವಾನ್ವಿತರಾಗಿದ್ದಾರೆ. ಆದ್ದರಿಂದ ಅವರು ಕೋಚಿಂಗ್ ಸಿಬ್ಬಂದಿಯಾಗಿ ಸೇರಲು ರೇಸ್ ಮುನ್ನಡೆಸುತ್ತಿದ್ದಾರೆ.
ವಿನಯ್ ಕುಮಾರ್ - ಬೌಲಿಂಗ್ ಕೋಚ್
ಭಾರತ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕನ್ನಡಿಗ ಹಾಗೂ ಮಾಜಿ ಕ್ರಿಕೆಟಿಗ ಆರ್ ವಿನಯ್ ಕುಮಾರ್ ಅವರ ಹೆಸರನ್ನು ಗೌತಮ್ ಗಂಭೀರ್ ಮುಂದಿಟ್ಟಿದ್ದಾರೆ.
ಭಾರತದ ಮಾಜಿ ವೇಗಿ ಆರ್ ವಿನಯ್ ಕುಮಾರ್ ಅವರು ಗೌತಮ್ ಗಂಭೀರ್ ನಾಯಕತ್ವದ ದಿನಗಳಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರು ಮತ್ತು ಇವರಿಬ್ಬರು ಬಲವಾದ ಬಾಂಧವ್ಯ ರೂಪಿಸಿಕೊಂಡಿದ್ದಾರೆ. ಆರ್ ವಿನಯ್ ಕುಮಾರ್ ಪ್ರಸ್ತುತ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಬಿಸಿಸಿಐ ಸಹಾಯಕ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸುವ ಸಾಧ್ಯತೆಯಿದೆ.
ವಿಜಯ್ ದಹಿಯಾ - ಫೀಲ್ಡಿಂಗ್ ಕೋಚ್
ಗೌತಮ್ ಗಂಭೀರ್ ಅವರ ಲಿಸ್ಟ್‌ನಲ್ಲಿರುವ ಇನ್ನೊಬ್ಬ ವಿಶ್ವಾಸಾರ್ಹ ಸಿಬ್ಬಂದಿ ವಿಜಯ್ ದಹಿಯಾ. ಭಾರತದ ಮಾಜಿ ವಿಕೆಟ್‌ಕೀಪರ್ ದೀರ್ಘಕಾಲದವರೆಗೆ ಕೆಕೆಆರ್ ತಂಡದ ಸಹಾಯಕ ಕೋಚ್ ಆಗಿದ್ದರು. ಗೌತಮ್ ಗಂಭೀರ್ ಮೆಂಟರ್ ಆಗಿದ್ದ ದಿನಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು. ಹೀಗಾಗಿ ಗೌತಮ್ ಗಂಭೀರ್ ಅವರನ್ನು ಬ್ಯಾಕ್ ರೂಂ ಸಿಬ್ಬಂದಿಯಾಗಿಯೂ ತರುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications