ಕಪಿಲ್‌ದೇವ್‌ನಷ್ಟೇ ಪರಿಣಾಮಕಾರಿ ಈತನ ಆಟ: ಅನುಭವಿ ಆಲ್‌ರೌಂಡರ್ ಬಗ್ಗೆ ಗಂಭೀರ್ ವಿಶೇಷ ಮಾತು

ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದ್ದು ಸುಲಭ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಟೀಮ್ ಇಂಡಿಯಾ ನೀಡಿದ ಸರ್ವಾಂಗೀಣ ಪ್ರದರ್ಶನದ ಕಾರಣದಿಂದಾಗಿ ಶ್ರೀಲಂಕಾ ಕೇವಲ ಮೂರೇ ದಿನದಲ್ಲಿ ಭಾರತ ತಂಡಕ್ಕೆ ಶರಣಾಗಿದೆ. ಅದರಲ್ಲೂ ಈ ಪಂದ್ಯದಲ್ಲಿ ಭಾರತೀಯ ತಮಡದ ಇಬ್ಬರು ಆಲ್‌ರೌಂಡರ್‌ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದು ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಟೀಮ್ ಇಂಡಿಯಾ ಆಲ್‌ರೌಂಡರ್‌ಗಳ ಈ ಭರ್ಜರಿ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದರಲ್ಲೂ ಓರ್ವ ಆಲ್‌ರೌಂಡರ್ ಟೀಮ್ ಇಂಡಿಯಾ ಪರವಾಗಿ ದಿಗ್ಗಜ ಕ್ರಿಕೆಟಿಗ ಕಪಿಲ್‌ದೇವ್ ಅವರಷ್ಟೇ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ ಎಂದು ಗಂಭೀರ್ ಹೇಳಿಕೆ ನೀಡಿದ್ದಾರೆ.
ಹಾಗಾದರೆ ಗಂಭೀರ್ ಹೇಳಿದ ಆ ಆಟಗಾರ ಯಾರು? ಯಾವ ಅಂಶಗಳನ್ನು ಉಲ್ಲೇಖಿಸಿ ಗಂಭೀರ್ ಈ ಮಾತುಗಳನ್ನು ಆಡಿದ್ದಾರೆ? ಮುಂದೆ ಓದಿ..

ಆರ್ ಅಶ್ವಿನ್ ಬಗ್ಗೆ ಗಂಭೀರ್ ಪ್ರಶಂಸೆಯ ಮಾತು
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿಶೇಷ ಮೆಚ್ಚಿಗೆಯ ಮಾತುಗಳನ್ನು ಆಡಿದ್ದು ಭಾರತದ ಅನುಭವಿ ಆಟಗಾರ ಆರ್ ಅಶ್ವಿನ್ ಬಗ್ಗೆ. ಆಲ್‌ರೌಂಡರ್ ಆಗಿ ಆರ್ ಅಶ್ವಿನ್ ಟೀಮ್ ಇಂಡಿಯಾಗೆ ಮಾಜಿ ಕ್ರಿಕೆಟಿಗ ಕಪಿಲ್‌ದೇವ್ ನೀಡುತ್ತಿದ್ದಷ್ಟೇ ಪರಿಣಾಮಕಾರಿಯಾದ ಪ್ರದರ್ಶನ ನೀಡುತ್ತಿದ್ದಾರೆ ಎಂದು ಆರ್ ಗೌತಮ್ ಗಂಭೀರ್ ಹೇಳಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನೀಂಗ್ಸ್‌ನಲ್ಲಿ ಆರ್ ಅಶ್ವಿನ್ ಬ್ಯಾಟಿಂಗ್‌ನಲ್ಲಿ 61 ರನ್‌ಗಳ ಕೊಡುಗೆ ನೀಡಿದರೆ ನಂತರ ಬೌಲಿಂಗ್‌ನಲ್ಲಿ 6 ವಿಕಕೆಟ್‌ಗಳ ಗೊಂಚಲನ್ನು ಸಂಪಾದಿಸಿದರು. ಈ ಸಂದರ್ಣದಲ್ಲಿ ಆರ್ ಆಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಕಪಿಲ್‌ದೇವ್ ಅವರ 434 ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿಎರಡನೇ ಸ್ಥಾನಕ್ಕೇರಿದ್ದಾರೆ.

ಬ್ಯಾಟಿಂಗ್ ಬೌಲಿಂಗ್ ಎರಡರಲ್ಲಿಯೂ ಅಶ್ವಿನ್ ಅದ್ಭುತ ಕೊಡುಗೆ
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅನುಭವಿ ಆಟಗಾರ ಆರ್ ಅಶ್ವಿನ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೀಡುವ ಕೊಡುಗೆಯ ಬಗ್ಗೆ ˍಮಾತನಾಡಿದ್ದಾರೆ. "ಆರ್ ಅಶ್ವಿನ್ ಐದು ಶತಕಗಳನ್ನು ಬಾರಿಸಿದ್ದಾರೆ. ಹಾಗಿದ್ದರು ಕೂಡ ನಾನು ಅಂಕಿಅಂಶಗಳ ಆಧಾರದಲ್ಲಿ ಮಾತನಾಡುವುದಿಲ್ಲ. ಅದು ಬಹುತೇಕ ಸಂದರ್ಭದಲ್ಲಿ ದಾರಿತಪ್ಪಿಸುತ್ತದೆ" ಎಂದಿದ್ದಾರೆ ಗಂಭೀರ್. ಆರ್ ಅಶ್ವಿನ್ ಭಾರತದ ಪರವಾಗಿ 85 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 27.14ರ ಸರಾಸರಿಯಲ್ಲಿ 2,905 ರನ್‌ಗಳಿಸಿದ್ದಾರೆ. ಆದರೆ ಕಪಿಲ್‌ದೇವ್ 131 ಟೆಸ್ಟ್ ಪಂದ್ಯಗಳಲ್ಲಿ 31.05ರ ಸರಾಸರಿಯಲ್ಲಿ 5248 ರನ್‌ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಸೇರಿಕೊಂಡಿದೆ.

ಮೆಲ್ಬರ್ನ್ ಸ್ಪೆಲ್ ಬಗ್ಗೆ ಗಂಭೀರ್ ಮಾತು
ಇನ್ನು ಗೌತಮ್ ಗಂಭೀರ್ ಟೀಮ್ ಇಂಡಿಯಾ ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮೆಲ್ಬರ್ನ್ ಟೆಸ್ಟ್‌ನಲ್ಲಿ ಆರ್ ಆಶ್ವಿನ್ ಅವರ ಬೌಲಿಂಗ್ ಸ್ಪೆಲ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಅಷ್ಟು ಅದ್ಭುತವಾದ ಸ್ಪೆಲ್‌ಅನ್ನು ನಾನು ನನ್ನ ವೃತ್ತಿ ಜೀವನದಲ್ಲೇ ಕಂಡಿಲ್ಲ ಎಂದಿದ್ದಾರೆ ಗಂಭೀರ್. "ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಅವರ ಸ್ಪೆಲ್ ಬಗ್ಗೆ ನಾನು ಈ ಹಿಂದೆಯೂ ಹೇಳಿದ್ದೆ ಈಗ ಮತ್ತೊಮ್ಮೆ ಹೇಳಿತ್ತಿದ್ದೇನೆ. ಈ ಸ್ಪೆಲ್ ನಾನು ನನ್ನ ವೃತ್ತಿ ಜೀವನದಲ್ಲಿ ಆಫ್‌ಸ್ಪಿನ್ನರ್ ಓರ್ವನಿಂದ ಕಂಡ ಅದ್ಭುತವಾದ ಸ್ಪೆಲ್ ಆಗಿತ್ತು. ಅದು ಪಂದ್ಯದ ಮೊದಲ ದಿನದ ಸ್ಪೆಲ್ ಆಗಿತ್ತು. ಆಗ ಸ್ಟೀವ್ ಸ್ಮಿತ್, ಮರ್ನಾಸ್ ಲ್ಯಾಬುಶೈನ್ ಹಾಗೂ ಮ್ಯಾಥ್ಯೂ ವೇಡ್ ಅವರ ವಿಕೆಟ್ ಪಡೆದಿದ್ದರು" ಎಂದು ಗಂಭೀರ್ ವಿವರಿಸಿದ್ದಾರೆ.

ಬೇರೆ ಯಾವ ಬೌಲರ್‌ನಿಂದಲೂ ಆ ರೀತಿಯ ಬೌಲಿಂಗ್ ಅಸಾಧ್ಯ
"ಆ ಪಂದ್ಯದ ಮೊದಲ ದಿನ ಅಶ್ವಿನ್ ಬೌಲಿಂಗ್ ಮಾಡಿದ ರೀತಿ, ಆಸ್ಟ್ರೇಲಿಯಾದ ಕಂಡೀಶನ್‌ನಲ್ಲಿ ಅದೂ ಕೂಡ ಕುಕಾಬುರಾ ಚೆಂಡಿನಲ್ಲಿ ಬೃರೆ ಯಾವ ಆಫ್‌ಸ್ಪಿನ್ನರ್ ಕುಡ ಆ ರೀತಿಯ ಬೌಲಿಂಗ್ ಮಾಡಲು ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ. ಯಾವುದೇ ಫಿಂಗರ್ ಸ್ಪಿನ್ನರ್ ಬಳಿ ನೀವು ಕೇಳಿದರೂ ಕುಕಾಬುರಾ ಚೆಂಡಿನಲ್ಲಿ ಬೌಲಿಂಗ್ ಮಾಡಲು ಇಷ್ಟಪಡಲಾರರು. ಯಾಕೆಂದರೆ ಆ ಚೆಂಡಿನಲ್ಲಿ ಒಂದೋ ಚೆಂಡು ವೇಗವನ್ನು ಪಡೆಯುತ್ತದೆ ಇಲ್ಲಾ ಬೌನ್ಸ್ ಪಡೆಯುತ್ತದೆ" ಎಂದು ಗೌತಮ್ ಗಂಭೀರ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications