ಧೋನಿಯ ಆ ಸಾಧನೆ ಬೇರೆ ಯಾರಿಂದಲೂ ಅಸಾಧ್ಯ: ವಿಶ್ವಕಪ್ ಸೋಲಿನ ಬೆನ್ನಲೇ ಗಂಭೀರ್ ಅಚ್ಚರಿಯ ಹೇಳಿಕೆ!

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದ್ದು ಹೋರಾಟ ಅಂತ್ಯವಾಗಿದೆ. ಈ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಭಾರತದ ಕನಸು ಮತ್ತೊಮ್ಮೆ ಭಗ್ನವಾಗಿದೆ. ಟೀಮ್ ಇಂಡಿಯಾದ ಈ ಸೋಲಿನ ಬೆನ್ನಲ್ಲೇ ಗೌತಮ್ ಗಂಭೀರ್ ಪ್ರತಿಕ್ರಿಯೆ ನಿಡಿದ್ದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸಾಧನೆಯನ್ನು ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸ್ಮರಿಸಿದ್ದು ಈ ರೀತಿಯ ಸಾಧನೆಯನ್ನು ಭಾರತದ ಬೇರೆ ಯಾವ ನಾಯಕನಿಂದಲೂ ನಿರೀಕ್ಷಿಸುವುದು ಅಸಾಧ್ಯ ಎಂದಿದ್ದಾರೆ.
ಸುದೀರ್ಘ ಕಾಲದಿಂದ ಭಾರತದ ಐಸಿಸಿ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿದುಕೊಂಡಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಮತ್ತೆ ಆ ಸಾಧನೆ ಮಾಡುವ ವಿಶ್ವಾಸ ಮೂಡಿಸಿತ್ತಾದರೂ ಸೆಮಿಫೈನಲ್‌ನಲ್ಲಿ ನೀಡಿದ ಹೀನಾಯ ಪ್ರದರ್ಶನದೊಂದಿಗೆ ಮತ್ತೆ ಆ ಕನಸು ಭಗ್ನವಾಗಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕುರಿತಾಗಿ ಗೌತಮ್ ಗಂಭೀರ್ ಆಡಿರುವ ಮಾತುಗಳು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಧೋನಿ ಬಗ್ಗೆ ಬಹುತೇಕ ಸಂದರ್ಭಗಳಲ್ಲಿ ಕಟುವಾಗಿ ಮಾತನಾಡುವ ಗೌತಮ್ ಗಂಭೀರ್ ಈ ಸಂದರ್ಭದಲ್ಲಿ ಆಡಿರುವ ಮಾತುಗಳು ಬಹುತೇಕರಿಗೆ ಅಚ್ಚರಿಯನ್ನುಂಟು ಮಾಡಿದೆ. ಮಾಜಿ ಆರಂಭಿಕ ಆಟಗಾರ ಧೋನಿ ಕುರಿತಾಗಿ ಆಡಿದ ಆ ಮಾತುಗಳ ಬಗ್ಗೆ ಮುಂದೆ ಓದಿ..

ಮೂರು ಐಸಿಸಿ ಟ್ರೋಫಿ ಗೆಲ್ಲುವುದು ಬೇರೆ ಯಾರಿಂದಲೂ ಅಸಾಧ್ಯ!
ಈ ಬಾರಿಯ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತದ ಸೋಲಿನ ಬಳಿಕ ಮಾತನಾಡಿದ ಗೌತಮ್ ಗಂಭೀರ್ ಟೀಮ್ ಇಂಡಿಯಾ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಮಾಡಿದ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಧೋನಿಯನ್ನು ಹೊರತುಪಡಿಸಿ ಉಳಿದ ಯಾರಿಂದಲೂ ಮೂರು ಐಸಿಸಿ ಟ್ರೋಫಿಯನ್ನು ಭಾರತಕ್ಕೆ ಗೆಲ್ಲಿಸಿಕೊಡಲು ಸಾಧ್ಯವಿದೆ ಎಂದು ನನಗೆ ಅನಿಸುತ್ತಿಲ್ಲ ಎಂದಿದ್ದಾರೆ ಗೌತಮ್ ಗಂಭೀರ್. ಈ ಮೂಲಕ ಮಾಜಿ ನಾಯಕ ಎಂಎಸ್ ಧೋನಿ ಸಾಧನೆಯನ್ನು ಕೊಂಡಾಡಿದ್ದಾರೆ.

ಧೋನಿ ನಾಯಕತ್ವವನ್ನು ಕೊಂಡಾಡಿದ ಗಂಭೀರ್
ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ಕೊಹ್ಲಿ, ರೋಹಿತ್ ದಾಖಲೆಯನ್ನು ಯಾರಾದರೂ ಮುರಿಯಬಹುದು ಆದರೆ ಧೋನಿ ದಾಖಲೆ ಅಸಾಧ್ಯ ಎಂದಿದ್ದಾರೆ. "ಬಹುಶಃ ಯಾರಾದರೂ ರೋಹಿತ್ ಶರ್ಮಾ ಅವರಿಗಿಂತ ಹೆಚ್ಚು ದ್ವಿಶತಕ ಸಿಡಿಸಿ ಅವರ ದಾಖಲೆಯನ್ನು ಮುರಿಯಬಹುದು, ವಿರಾಟ್ ಕೊಹ್ಲಿಗಿಂತ ಹೆಚ್ಚು ಶತಕ ಸಿಡಿಸಬಹುದು. ಆದರೆ ಭಾರತದ ಯಾವುದೇ ನಾಯಕ ಐಸಿಸಿಯ ಮೂರು ಟ್ರೋಫಿಗಳನ್ನು ಗೆಲ್ಲುವುದು ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ" ಎಂದಿದ್ದಾರೆ ಗೌತಮ್ ಗಂಭೀರ್.

ನಾಯಕನಾಗಿ ಮಾಹಿ ಸಾಧನೆ
ಎಂಎಸ್ ಧೋನಿ ನಾಯಕನಾಗಿ ಯುವ ಆಟಗಾರರ ಪಡೆಯೊಂದಿಗೆ ಟೀಮ್ ಇಂಡಿಯಾ 2007ರಲ್ಲಿ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಬಳಿಕ ಧೋನಿ ನಾಯಕತ್ವದಲ್ಲಿಯೇ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದು ಸಾಧನೆ ಮಾಡಿದ ಭಾರತ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಕೂಡ ಧೋನಿ ನಾಯಕತ್ವದಲ್ಲಿಯೇ ಗೆದ್ದು ಬೀಗಿತ್ತು. ಈ ಮೂಲಕ ಐಸಿಸಿಯ ಎಲ್ಲಾ ಮೂರು ಟ್ರೋಫಿಗಳನ್ನು ಕೂಡ ಗೆದ್ದ ವಿಶ್ವದ ಏಕೈಕ ನಾಯಕ ಎನಿಸಿಕೊಂಡಿದ್ದಾರೆ ಮಾಹಿ.

ಅಭಿಮಾನಿಗಳಿಂದಲೂ ಧೋನಿ ಧ್ಯಾನ
ಇನ್ನು ಟೀಮ್ ಇಂಡಿಯಾ ಮತ್ತೊಮ್ಮೆ ಟಿ20 ವಿಶ್ವಕಪ್‌ನಲ್ಲಿ ಸೋಲು ಅನುಭವಿಸಿದ ಬಳಿಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಧೋನಿ ಸಾಧನೆಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಒಂದಾದ ಬಳಿಕ ಮತ್ತೊಂದರಂತೆ ಐಸಿಸಿ ಟ್ರೋಫಿ ಗೆದ್ದ ಕೊಟ್ಟ ಧೋನಿ ಭಾರತದ ಶ್ರೇಷ್ಠ ನಾಯಕ ಎಂದು ಅಭಿಮಾನಿಗಳು ಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications