ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಖಡಕ್ ಮಾತುಗಳಿಂದ ಯಾವಾಗಲೂ ಸುದ್ದಿಯಲ್ಲಿರುವ ಆಟಗಾರ. ತಮ್ಮ ಅಭಿಪ್ರಾಯಗಳನ್ನು ನೇರವಾಗಿಯೇ ತಿಳಿಸುವ ಗಂಭೀರ್ ಅದೇ ಕಾರಣಕ್ಕೆ ಹಲವು ವಿವಾದಗಳಿಗೂ ತುತ್ತಾಗಿದ್ದಾರೆ. ಇದೀಗ ಗೌತಮ್ ಗಂಭಿರ್ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ಬ್ಯಾಟಿಂಗ್ ಶೈಲಿಯ ಬಗ್ಗೆ ಕಟುವಾದ ಟೀಕೆ ಮಾಡಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರು ಹೆಚ್ಚು ಆಕ್ರಮಣಕಾರಿಯಾಗಿ ಹಾಗೂ ತೀವ್ರತೆಯ ಪ್ರದರ್ಶನ ನೀಡಬೇಕು ಎಂದಿದ್ದಾರೆ ಗಂಭೀರ್. ಬಾಬರ್ ಅಜಂ ಅವರ ಬ್ಯಾಟಿಂಗ್‌ನಲ್ಲಿನ ಈ ಬದಲಾವಣೆ ವಿಶ್ವಕಪ್ ಟೂರ್ನಿಯಲ್ಲಿಯೇ ಆಗಬೇಕಿದೆ ಎಂದಿದ್ದಾರೆ ಗಂಭೀರ್. ಈ ಬಾರಿಯ ವಿಶ್ವಕಪ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಎರಡು ಸೋಲು ಅನುಭವಿಸಿರುವ ಪಾಕಿಸ್ತಾನ ತಂಡ ನಾಲ್ಕು ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಆದರೆ ಪ್ರಸ್ತುತ ಟಾಪ್ 4 ಪಟ್ಟಿಯಿಂದ ಹೊರಬಿದ್ದಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಆರಂಭ ಉತ್ತಮವಾಗಿಯೇ ಇತ್ತು. ಮೊದಲಿಗೆ ನೆದರ್ಲೆಂಡ್ಸ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಪಾಕ್ ತಂಡ ಬಳಿಕ ಶ್ರೀಲಂಕಾ ವಿರುದ್ಧ ದಾಖಲೆಯ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿತು. ಆದರೆ ನಂತರ ಭಾರತದ ವಿರುದ್ಧ ಭಾರೀ ಸೋಲು ಅನುಭವಿಸಿದ ಪಾಕ್ ತಂಡ ಆಸ್ಟ್ರೇಲಿಯಾ ವಿರುದ್ಧವೂ ಸೋಲು ಅನುಭವಿಸಿದೆ.
ಇದೀಗ ಪಾಕಿಸ್ತಾನ ಅಫ್ಘಾನಿಸ್ತಾನ ತಂಡವನ್ನು ತನ್ನ ಐದನೇ ಪಂದ್ಯದಲ್ಲಿ ಎದುರಿಸುತ್ತಿದೆ. ಈ ಪಂದ್ಯಕ್ಕೂ ಮುನ್ನ ಗೌತಮ್ ಗಂಭೀರ್ ಮಾತನಾಡಿದ್ದಾರೆ. "ಬಾಬರ್ ಅಜಂ ಒತ್ತಡದಲ್ಲಿದ್ದಾರೆ. ಇಡೀ ತಂಡವೇ ಒತ್ತಡದಲ್ಲಿದೆ. ಬಾಬರ್ ಅವರಿಂದ ಉತ್ತಮವಾದ ಪ್ರದರ್ಶನ ಬರಲೇಬೇಕಿದೆ ಯಾಕೆಂದರೆ ಆತನಲ್ಲಿ ಆ ಸಾಮರ್ಥ್ಯವಿದ್ದು ಆತನೋರ್ವ ಕ್ಲಾಸ್ ಆಟಗಾರ. ಬಾಬರ್ ಅಜಂ ಟಾಪ್ 5 ಆಟಗಾರನಾಗಲಿದ್ದಾರೆ ಎಂದು ನಾನು ಆಯ್ಕೆ ಮಾಡಿದ್ದೆ. ಭಾರತದಲ್ಲಿ ಆತನ ನಿಂದ ಮೂರ್ನಾಲ್ಕು ಶತಕ ಬರಲಿದೆ ಎಂದು ನಾನು ಹೇಳಿದ್ದೇನೆ. ಈಗಲೂ ಆತನಲ್ಲಿ ಅದನ್ನು ಸಾಧಿಸುವ ಸಾಮರ್ಥ್ಯವಿದೆ" ಎಂದಿದ್ದಾರೆ ಗೌತಮ್ ಗಂಭೀರ್.
"ಅವರು ರನ್ ಗಳಿಸಿ ತಂಡವನ್ನು ಗೆಲ್ಲಿಸಬೇಕು ಏಕೆಂದರೆ ಅವರು 60 ಅಥವಾ 70 ಎಸೆತಗಳಲ್ಲಿ 50 ರನ್ ಗಳಿಸಿದರೆ ಅಥವಾ 120 ಎಸೆತಗಳಲ್ಲಿ 80 ರನ್ ಗಳಿಸಿದರೆ ಯಾವುದೇ ಪ್ರಯೋಜನವಿಲ್ಲ. ಅವರು ಭಾರತದ ವಿರುದ್ಧ ಆಡಿದ ರೀತಿಯಿಂದಾಗಿ ಅವರು ಹೆಚ್ಚು ಒತ್ತಡಕ್ಕೆ ಒಳಗಾದರು ಎನಿಸಿತು" ಎಂದಿದ್ದಾರೆ ಗಂಭೀರ್.
"ನಿಮ್ಮ ತಂಡ ಆಕ್ರಮಣಕಾರಿ ಆಟವನ್ನು ಆಡಬೇಕು ಎಂದಿದ್ದರೆ ನೀವು ಮುಂದೆ ನಿಂತು ಆಡಬೇಕು. ಬಾಬರ್ ನಿರಾಳವಾಗಿ ಆಡಬೇಕು. ಔಟ್ ಆಫ್ ದಿ ಬಾಕ್ಸ್ ಕ್ರಿಕೆಟ್ ಆಡಬೇಕು ಮಾತ್ರವಲ್ಲದೆ ತಂಡ ಸೆಮಿಫೈನಲ್‌ಗೆ ಪ್ರವೇಶಿಸಬೇಕಾದರೆ ನಾಯಕನಾಗಿಯೂ ಔಟ್ ಆಫ್ ಬಾಕ್ಸ್ ಚಿಂತನೆ ನಡೆಸಬೇಕಿದೆ" ಎಂದಿದ್ದಾರೆ.