ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ಕಳೆದ ಎರಡು ದಿನಗಳಿಂದ ಭಾರತ ಶೋಕದಲ್ಲಿದೆ. ಎಲ್ಲೆಡೆ ಈ ಅಹಿತಕರ ಘಟನೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರಿಗೆ ಕಾಶ್ಮೀರದ ಐಸಿಸ್ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಬಂದಿದೆ. ಈ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿದೆ. ವರದಿಗಳ ಪ್ರಕಾರ, ಗಂಭೀರ್ ಅವರಿಗೆ ಇಮೇಲ್ ಬಂದಿದ್ದು, ಅದರಲ್ಲಿ ಜೀವ ಬೆದರಿಕೆ ಹಾಕಲಾಗಿದೆ.
ಗೌತಮ್ ಗಂಭೀರ್ ಅವರಿಗೆ ಕಾಶ್ಮೀರದ ಐಸಿಸ್ ಉಗ್ರ ಸಂಘಟನೆ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಗಳಾಗಿವೆ. ಇದಾದ ನಂತರ, ಗೌತಮ್ ಗಂಭಿರ್ ಅವರು ಈ ಸಂಬಂಧ ದೆಹಲಿಯ ರಾಜಿಂದರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ರಾಜಿಂದರ್ ನಗರ ಪೊಲೀಸ್ ಠಾಣೆ ಮತ್ತು ಕೇಂದ್ರ ಡಿಸಿಪಿ ಅಧಿಕಾರಿಗಳು ತಿಳಿಸಿದ್ದಾರೆ.

ಗೌತಮ್ ಗಂಭೀರ್ ಅವರಿಗೆ ಏಪ್ರಿಲ್ 22 ರಂದು ಬೆದರಿಕೆ ಇಮೇಲ್ ಬಂದಿತ್ತು. ಇಮೇಲ್‌ನಲ್ಲಿ "ನಾನು ನಿನ್ನನ್ನು ಕೊಲ್ಲುತ್ತೇನೆ' ಎಂಬ ಮೂರು ಪದಗಳಿದ್ದವು. ಇದಕ್ಕೂ ಮೊದಲು, ಗೌತಮ್ ಗಂಭೀರ್ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಮೃತರಿಗಾಗಿ ಪ್ರಾರ್ಥಿಸಿದ್ದರು. ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, "ಮೃತರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತೇನೆ. ಇದಕ್ಕೆ ಕಾರಣರಾದವರು ಬೆಲೆ ತೆರಬೇಕಾಗುತ್ತದೆ. ಭಾರತ ದಾಳಿ ಮಾಡುತ್ತದೆ ಎಂದು ಬರೆದುಕೊಂಡಿದ್ದರು.
ಗಂಭೀರ್ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮೇಲ್ ಕಳುಹಿಸಿದವರನ್ನು ಗುರುತಿಸುವುದರ ಜೊತೆಗೆ ಮೇಲ್ ಅನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಈ ಮೇಲ್ ಸ್ವೀಕರಿಸಿದ ನಂತರ, ಗಂಭೀರ್ ತಮ್ಮ ಮತ್ತು ತಮ್ಮ ಕುಟುಂಬದ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ, ಟೀಮ್ ಇಂಡಿಯಾದ ಅನೇಕ ಆಟಗಾರರು ಅದನ್ನು ಖಂಡಿಸಿದ್ದಾರೆ.
ಗಂಭೀರ್ ಅವರಿಗೆ ಜೀವ ಬೆದರಿಕೆ ಬರುತ್ತಿರುವುದು ಇದೇ ಮೊದಲಲ್ಲ. 2021 ರ ಆರಂಭದಲ್ಲಿ, ಮಾಜಿ ಕ್ರಿಕೆಟಿಗನಿಗೆ ಇದೇ ರೀತಿಯ ಕೊಲೆ ಬೆದರಿಕೆಗಳು ಬಂದಿದ್ದವು. ಇದಾದ ನಂತರ ಅವರು ದೆಹಲಿ ಪೊಲೀಸರನ್ನು ಸಂಪರ್ಕಿಸಿದಾಗ ರಾಜೇಂದ್ರ ನಗರದಲ್ಲಿರುವ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಯಿತು.
ಗಂಭೀರ್ 2018 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ಮೊದಲು 15 ವರ್ಷಗಳ ಕಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪರ ಆಡಿದ್ದರು. 2019 ರಲ್ಲಿ ಗಂಭೀರ್ ಪೂರ್ವ ದೆಹಲಿಯಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, ಅವರು 2024 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ರಾಜಕೀಯವನ್ನು ತೊರೆದರು.
ತಮ್ಮ ನಿರ್ಧಾರವನ್ನು ಪ್ರಕಟಿಸಿದ ಗಂಭೀರ್, ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಗಮನಹರಿಸಲು ಸಾಧ್ಯವಾಗುವಂತೆ ರಾಜಕೀಯ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ವಿನಂತಿಸಿದರು. ಅವರು ಈಗ 2024 ರಿಂದ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.