ಈ ಹಣಕ್ಕಾಗಿ ಐಪಿಎಲ್‌ನಲ್ಲಿ ಕೆಲಸ ಮಾಡಿದೆ ಎಂಬುದನ್ನು ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ: ಗಂಭೀರ್!

ಗೌತಮ್ ಗಂಭೀರ್, ಭಾರತದ ವಿಶ್ವಕಪ್ ವಿಜಯದ ಹೀರೋ ಎಂದೇ ಹೆಸರನ್ನು ಮಾಡಿರುವಂತಹ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲೋರ್ವರು. ಆಟಗಾರನಾಗಿದ್ದಾಗ ಹಲವಾರು ದಾಖಲೆ ಮತ್ತು ಮೈಲಿಗಲ್ಲುಗಳನ್ನು ಸೃಷ್ಟಿಸಿರುವ ಗೌತಮ್ ಗಂಭೀರ್ ಇದೀಗ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಬಿಜೆಪಿ ಪಕ್ಷದ ಪ್ರಮುಖ ಸದಸ್ಯನಾಗಿದ್ದಾರೆ. ಪೂರ್ವ ದೆಹಲಿ ಕ್ಷೇತ್ರದಿಂದ ಗೆದ್ದು ಲೋಕಸಭಾ ಸದಸ್ಯನಾಗಿರುವ ಗೌತಮ್ ಗಂಭೀರ್ ಇದರ ನಡುವೆಯೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ 2 ಬಾರಿ ಟ್ರೋಫಿಯನ್ನು ಗೆಲ್ಲಿಸಿದ್ದ ಗೌತಮ್ ಗಂಭೀರ್ ಸಾಕಷ್ಟು ದೊಡ್ಡ ಮಟ್ಟದ ಅನುಭವವನ್ನು ಹೊಂದಿರುವ ಕಾರಣ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಮಾರ್ಗದರ್ಶಕರನ್ನಾಗಿ ನೇಮಿಸಿಕೊಂಡಿತು. ನಿಷ್ಕೃಷ್ಟ ಸ್ವಭಾವದ ಗೌತಮ್ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡಿದರು, ಫಲಿತಾಂಶವಾಗಿ ತಂಡ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಹೀಗೆ ಮಾರ್ಗದರ್ಶಕನಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ಲೇ ಆಫ್ ಹಂತದವರೆಗೂ ಯಶಸ್ವಿಯಾಗಿ ಮುನ್ನಡೆಸುವಲ್ಲಿ ಸಹಕರಿಸಿದ್ದ ಗೌತಮ್ ಗಂಭೀರ್ ಐಪಿಎಲ್ ಆವೃತ್ತಿಯಲ್ಲಿ ಕೆಲಸ ಮಾಡುವುದರ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಲೋಕಸಭೆಯ ಸದಸ್ಯನಾಗಿದ್ದರೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಣಕ್ಕಾಗಿ ಕೆಲಸಮಾಡುತ್ತಾರೆ ಎಂದೆಲ್ಲಾ ಕೆಲವರು ನಾಲಿಗೆ ಹರಿಬಿಟ್ಟಿದ್ದರು. ಆದರೆ ಈ ಯಾವುದೇ ಟೀಕೆಗಳಿಗೂ ಇಲ್ಲಿವರೆಗೂ ಪ್ರತಿಕ್ರಿಯಿಸದೇ ಇದ್ದ ಗೌತಮ್ ಗಂಭೀರ್ ಇದೀಗ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವ ವೇಳೆ ಮೌನ ಮುರಿದಿದ್ದಾರೆ. ತಾವು ಲೋಕಸಭೆಯ ಸದಸ್ಯನಾಗಿದ್ದರೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಲಸ ಮಾಡಲು ಮುಂದಾಗಿದ್ದು ಯಾಕೆ ಎಂಬುದರ ಕಾರಣವನ್ನು ಈ ಕೆಳಕಂಡಂತೆ ಗಂಭೀರ್ ಬಿಚ್ಚಿಟ್ಟಿದ್ದಾರೆ.

ಐಪಿಎಲ್ ಕೆಲಸ ಮಾಡಿದ್ದು ಈ ಕಾರಣಕ್ಕೆ
"ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿ ಲೋಕಸಭೆಯ ಸದಸ್ಯನಾದ ನಂತರವೂ ಸಹ ಕೆಲಸ ಮಾಡುವುದಕ್ಕೆ ಕಾರಣವೇನೆಂದರೆ ಪ್ರತಿ ತಿಂಗಳು 5000 ಜನಕ್ಕೆ ನಾನು ಆಹಾರ ವ್ಯವಸ್ಥೆ ಮಾಡಲು 25 ಲಕ್ಷ ಹಣ ಬೇಕು. ಇದು ವರ್ಷಕ್ಕೆ ಸುಮಾರು 2.75 ಕೋಟಿ ರೂಪಾಯಿಗಳಾಗುತ್ತದೆ. ಹಾಗೂ ಗ್ರಂಥಾಲಯ ಕಟ್ಟಿಸಲು ನಾನು 25 ಲಕ್ಷ ಖರ್ಚು ಮಾಡಿದ್ದೇನೆ. ಇದಕ್ಕೆಲ್ಲಾ ನಾನು ನನ್ನ ಸ್ವಂತ ಹಣವನ್ನೇ ಖರ್ಚು ಮಾಡುತ್ತಿದ್ದೇನೆ ಹೊರತು ಸರ್ಕಾರ ನೀಡುವ ಹಣದಿಂದಲ್ಲ. ಇದಕ್ಕೆಲ್ಲಾ ಹಣ ನೀಡಲು ನಾನು ಮನೆಯಲ್ಲಿ ಹಣದ ಮರವನ್ನೂ ಬೆಳೆಸಿಲ್ಲ, ಹೀಗಾಗಿ ಐಪಿಎಲ್ ಟೂರ್ನಿಯಲ್ಲಿ ಕೆಲಸ ಮಾಡಿದೆ" ಎಂದು ಗೌತಮ್ ಗಂಭೀರ್ ಟೀಕಾಕಾರರಿಗೆ ಉತ್ತರವನ್ನು ನೀಡಿದ್ದಾರೆ.

ಈ ವಿಷಯವನ್ನು ಹೇಳಿಕೊಳ್ಳುವುದರಲ್ಲಿ ನನಗೆ ಯಾವುದೇ ನಾಚಿಕೆ ಇಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ಗೌತಮ್ ಗಂಭೀರ್ ನಾನು ಕೆಲಸ ಮಾಡಿದರೆ ಮಾತ್ರ ಆ 5000 ಜನರಿಗೆ ಆಹಾರ ವ್ಯವಸ್ಥೆ ಮಾಡಲು ಸಾಧ್ಯ, ಅದಕ್ಕಾಗಿ ಐಪಿಎಲ್ ಟೂರ್ನಿಯಲ್ಲಿ ಕೆಲಸ ಮಾಡಿದ್ದೇನೆ ಎಂಬುದನ್ನು ಹೇಳಿಕೊಳ್ಳುವುದರಲ್ಲಿ ನನಗೆ ಯಾವುದೇ ನಾಚಿಕೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸಮಾಜಮುಖಿ ಕೆಲಸಗಳಲ್ಲಿ ಗಂಭೀರ್ ಎತ್ತಿದ ಕೈ
ಇನ್ನು ಕ್ರಿಕೆಟ್ ಹೊರತುಪಡಿಸಿ ಗಂಭೀರ್ ಜನನಾಯಕನಾಗಿ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತು ಕಣ್ಣಾಡಿಸಿದರೆ ಅವರ ಉತ್ತಮ ಕಾರ್ಯಗಳು ಕಾಣಸಿಗಲಿವೆ. ಅವರ ಕ್ಷೇತ್ರದಲ್ಲಿ ಉಚಿತ ಭೋಜನ, 1 ರೂಪಾಯಿಗೆ ಹೊಟ್ಟೆ ತುಂಬಾ ಊಟ, ಉಚಿತ ಲೈಬ್ರರಿ ಹೀಗೆ ಹತ್ತು ಹಲವಾರು ಸಮಾಜಮುಖಿ ಕೆಲಸಗಳು ಕಂಡುಬರುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications