
ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ. ಸದ್ಯ ಭಾರತ ತವರಿನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುತ್ತಿದ್ದು ಅದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ವೈಟ್‌ಬಾಲ್ ಸರಣಿಯನ್ನು ಆಡಲಿದೆ. ಆದರೆ ಅದಾದ ಬಳಿಕ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೇಲೆ ಈಗ ಎಲ್ಲರ ಚಿತ್ತವಿದೆ. ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಕ್ರಿಕೆಟ್ ಅಭಿಮಾನಿಗಳಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿದೆ.
ಭಾರತದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಎರಡು ತಂಡಗಳಿಗೂ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅಂತಿಮ ಸರಣಿಯಾಗಿದೆ ಎಂಬುದು ವಿಶೇಷ. ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡುವುದನ್ನು ಈಗಾಗಲೇ ಖಚಿತಪಡಿಸಿಕೊಂಡಿದ್ದರೆ ಭಾರತಕ್ಕೆ ಈ ಸರಣಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲು ಅವಕಾಶವಿದೆ. ಸದ್ಯ ಈ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.
ಇನ್ನು ಈ ಬಾರ್ಡರ್-ಗವಾಸ್ಕರ್ ಟ್ರೋಫಿ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭಿರ್ ಮಾತನಾಡಿದ್ದು ಈ ಸರಣಿಯಲ್ಲಿ ಕುಲ್‌ದೀಪ್ ಯಾದವ್‌ಗೆ ಅವಕಾಶ ದೊರೆತರೆ ಅವರು "X ಫ್ಯಾಕ್ಟರ್' ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ಅವರಿಗಿಂತ ಕುಲ್ದೀಪ್ ಪರಿಣಾಮಕಾರಿ ಎನಿಸಲಿದ್ದಾರೆ ಎಂದು ಗಂಭೀರ್ ಭವಿಷ್ಯ ನುಡಿದಿದ್ದಾರೆ.
"ಆತನಲ್ಲಿ ಸಾಕಷ್ಟು ಪ್ರತಿಭೆಯಿದೆ. ಆತನ ಆತ್ಮವಿಶ್ವಾಸ ಇಲ್ಲಿ ಮುಖ್ಯ ಪಾತ್ರವಹಿಸುತ್ತದೆ. ನಾಯಕ ರೋಹಿತ್ ಶರ್ಮಾ ಯುವ ಬೌಲರ್‌ಗಳಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ತುಂಬಬಲ್ಲವರು. ಈಗ ಅವರು ಕುಲ್‌ದೀಪ್ ಯಾದವ್‌ಗೆ ಬೆಂಬಲ ನೀಡಬೇಕಾದ ಸಮಯ ಬಂದಿದೆ. ಕುಲ್‌ದೀಪ್ ಯಾದವ್ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ ಬೌಲಿಂಗ್ ನಡೆಸುವುದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಹಳ ಪ್ರಮುಖ ಪಾತ್ರವಹಿಸಲಿದೆ. ಆ ಸರಣಿಗು ಮುನ್ನ ನಡೆಯಲಿರುವ ಏಕದಿನ ಸರಣಿಯಲ್ಲಿ ಕಡೆಗಣಿಸಿ ಬಳಿಕ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶ ನೀಡಿದರೆ ಆಗ ಅದು ಕಡಿಮೆ ಪರಿಣಾಮಕಾರಿಯಾಗಿರಲಿದೆ" ಎಂದಿದ್ದಾರೆ ಗೌತಮ್ ಗಂಭೀರ್.
ಇನ್ನು ಕುಲ್ದೀಪ್ ಯಾದವ್ ಕಳೆದ ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ ತಂಡದ ಪರವಾಗಿ ಆಡಿ ಮೊದಲ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಬೌಲಿಂಗ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದ ಕುಲ್ದೀಪ್ ಯಾದವ್ ಬ್ಯಾಟಿಂಗ್‌ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಕುಲ್‌ದೀಪ್‌ಗೆ ದೊರೆತಿತ್ತು.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ನಡೆಯುವ ಎಲ್ಲಾ ಏಕದಿನ ಪಂದ್ಯಗಳಲ್ಲಿಯೂ ಕುಲ್‌ದೀಪ್‌ಗೆ ಆಡುವ ಅವಕಾಶ ದೊರೆಯಬೇಕು ಎಂದಿದ್ದಾರೆ ಗಂಭೀರ್. ಹಾಗಾದಲ್ಲಿ ಕುಲ್‌ದೀಪ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂದಿದ್ದಾರೆ.