
ಟೀಮ್ ಇಂಡಿಯಾದ ಅನುಭವಿ ಆಟಗಾರ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಫಾರ್ಮ್ ವಿಚಾರವಾಗಿ ಇತ್ತೀಚೆಗೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಕೆಎಲ್ ರಾಹುಲ್ ಪ್ರದರ್ಶನವನ್ನು ಉಲ್ಲೇಖಿಸಿ ಕಟು ಟೀಕೆಗೆ ಗುರಿಯಾಗಿದ್ದರು ಕೆಎಲ್ ರಾಹುಲ್. ಆದರೆ ಮಾಜಿ ಕ್ರಿಕೆಟಿಗ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದು ಮಾಜಿ ಕ್ರಿಕೆಟಿಗರ ಟೀಕೆಗೆ ತಿರುಗೇಟು ನೀಡಿದ್ದಾರೆ.
ಕೆಎಲ್ ರಾಹುಲ್ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ಮಾಜಿ ಕ್ರಿಕೆಟಿಗರಿಗೆ ತಮ್ಮ ಅಸ್ತಿತ್ವ ಉಳಿದುಕೊಳ್ಳಲು ಮಸಾಲೆಗಳ ಅಗತ್ಯವಿದೆ ಎಂದಿದ್ದಾರೆ ಗೌತಮ್ ಗಂಭೀರ್. ಈ ಸಂದರ್ಭದಲ್ಲಿ ಅವರು ಕೆಎಲ್ ರಾಹುಲ್ ಯಾವುದೇ ಒತ್ತಡದಲ್ಲಿ ಇಲ್ಲ ಎಂದಿದ್ದು ಐಪಿಎಲ್‌ನಲ್ಲಿ ಈಗಾಗಲೇ ಅವರು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಟಗಾರ ಎಂದಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಮೊದಲ ಎರಡು ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿದ್ದರು. ಈ ಮೂಲಕ ತಮ್ಮ ಕೆಟ್ಟ ಫಾರ್ಮ್ ಮುಂದುವರಿಸಿದ್ದ ರಾಹುಲ್ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ತಂಡದಿಂದ ಹೊರಬಿದ್ದಿದ್ದರು. ಈ ಅವಧಿಯಲ್ಲಿ ಅವರು ಟೆಸ್ಟ್ ತಂಡದ ಉಪನಾಯಕನ ಸ್ಥಾನವನ್ನು ಕೂಡ ಕಳೆದುಕೊಂಡಿದ್ದಾರೆ. ಟೆಸ್ಟ್ ಸರಣಿಯಲ್ಲಿ ರಾಹುಲ್ ಬದಲಿಗೆ ಸ್ಥಾನವನ್ನು ಪಡೆದುಕೊಂಡ ಶುಬ್ಮನ್ ಗಿಲ್ ಕೊನೆಯ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.
ಕೆಎಲ್ ರಾಹುಲ್ ವಿರುದ್ಧ ಕಟು ಟೀಕೆ ಮಾಡಿದ್ದ ವೆಂಕಟೇಶ್ ಪ್ರಸಾದ್: ಟೆಸ್ಟ್ ಮಾದರಿಯ ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕೆಎಲ್ ರಾಹುಲ್ ಬಗ್ಗೆ ಅತ್ಯಂತ ಕಟುವಾಗಿ ಟೀಕೆ ಮಾಡಿದ್ದವರು ಕನ್ನಡಿಗರೇ ಆಗ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್. ಟೀಮ್ ಇಂಡಿಯಾದಲ್ಲಿ ಕೆಎಲ್ ರಾಹುಲ್ ಸ್ಥಾನದ ಬಗ್ಗೆ ವೆಂಕಟೇಶ್ ಪ್ರಸಾದ್ ಸತತವಾಗಿ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಅಲ್ಲದೆ ಈ ವಿಚಾರವಾಗಿ ಮತ್ತೋರ್ವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪದಗಳ ಚಕಮಕಿಗಳು ನಡೆದಿದ್ದವು.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಕೇವಲ 38 ರನ್ ಮಾತ್ರವೇ ಗಳಿಸಲು ಶಕ್ತವಾಗಿದ್ದರು. ಹೀಗಾಗಿ ರಾಹುಲ್ ಕೊನೆಯ ಎರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಆದರೆ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. 189 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದ ಸಂದರ್ಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾಗೆ ರಾಹುಲ್ ಅವರ ಅಜೇಯ 75 ರನ್‌ಗಳ ಕೊಡುಗೆ ತಂಡಕ್ಕೆ ಗೆಲುವು ತಂದಿಟ್ಟಿತು.
"4-5 ಶತಕಗಳನ್ನು ಬಾರಿಸಿರುವ ಆಟಗಾರರ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಕಳೆದ ಆವೃತ್ತಿಯಲ್ಲಿಯೂ ರಾಹುಲ್ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸಿದ್ದರು. ಇಲ್ಲಿ ಸಾಕಷ್ಟು ಜನರಿದ್ದು ಮಾಜಿ ಕ್ರಿಕೆಟಿಗರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಿದ್ದರೆ ಅವರಿಗೆ ಮಸಾಲೆಗಳ ಅಗತ್ಯವಿದೆ. ಹಾಗಾಗಿ ಆಟಗಾರರನ್ನು ಟೀಕಿಸುತ್ತಾರೆ. ನನ್ನ ಪ್ರಕಾರ ಕೆಎಲ್ ರಾಹುಲ್ ಅತ್ಯಂತ ಅಪರೂಪದ ಆಟಗಾರ. ಆತನ ಮೇಲೆ ಯಾವುದೇ ಒತ್ತಡಗಳು ಇಲ್ಲ. ಓರ್ವ ಆಟಗಾರನಿಂದಾಗಿ ನೀವು ಟೂರ್ನಿಯನ್ನು ಗೆಲ್ಲಲು ಸಾಧ್ಯವಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿರುವ 25 ಆಟಗಾರರು ಟೂರ್ನಿ ಗೆಲ್ಲಲು ಸಹಾಯ ಮಾಡಬೇಕಾಗುತ್ತದೆ" ಎಂದಿದ್ದಾರೆ ಗೌತಮ್ ಗಂಭೀರ್.