ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಪ್ಲೇ ಆಫ್ ಆರ್ಹತೆ ಪಡೆಯಲು ಹೋರಾಟ ನಡೆಯುತ್ತಿದೆ. ಈಗಾಗಲೇ ಶ್ರೇಯಸ್ ಅಯ್ಯರ್ ಮುನ್ನೆಡೆಸುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ.
ಐದು ಬಾರಿ ಐಪಿಎಲ್ ಪ್ರಶಸ್ತಿ ಎತ್ತಿ ಹಿಡಿದು ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಕಳಪೆ ಪ್ರದರ್ಶನದಿಂದ ಪ್ಲೇ ಆಫ್ ರೇಸ್‌ನಿಂದ ಹೊರ ಬಿದ್ದಿದೆ. ಹೀಗಾಗಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟೀಕೆ ಮಾಡುತ್ತಿದ್ದಾರೆ.

ಟೂರ್ನಿ ಆರಂಭದಿಂದಲ್ಲೇ ಹಾರ್ದಿಕ್ ಪಾಂಡ್ಯ ನಾಯಕತ್ವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಇದೀಗ ಮುಂಬೈ ಟೂರ್ನಿಯಿಂದ ದೂರ ಸರಿಯುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಹಾರ್ದಿಕ್ ಪಾಂಡ್ ನಾಯಕತ್ವದ ಕೌಶಲ್ಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಅವರು ಹಾರ್ದಿಕ್ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದು, ಎಬಿ ಡಿವಿಲಿಯರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಿವಿಲಿಯರ್ಸ್ ಅವರು ಐಪಿಎಲ್‌ನಲ್ಲಿ ತಂಡಕ್ಕೆ ನಾಯಕತ್ವ ವಹಿಸದ ಕಾರಣ ಪಾಂಡ್ಯ ಅವರ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸಲು ಅರ್ಹರಲ್ಲ. ಪಾಂಡ್ಯ ಅವರ ಆನ್-ಫೀಲ್ಡ್ ವ್ಯಕ್ತಿತ್ವ ನಿಜವಾದದ್ದಲ್ಲ ಮತ್ತು ಹಿರಿಯ ಮುಂಬೈ ಆಟಗಾರರು ಹಾರ್ದಿಕ್ ನಾಯಕತ್ವದ ಪಾತ್ರವನ್ನು ಒಪ್ಪಿಕೊಂಡಿಲ್ಲ ಎಂದು ಡಿವಿಲಿಯರ್ಸ್ ವಿರುದ್ಧ ಗಂಭೀರ್ ಸಿಡಿದೆದ್ದಿದ್ದಾರೆ.
ಡಿವಿಲಿಯರ್ಸ್ ನಾಯಕರಾಗಿದ್ದಾಗ ಅವರ ಸ್ವಂತ ಪ್ರದರ್ಶನ ಏನು? ಅದರ ಬಗ್ಗೆ ನಾನು ಯೋಚಿಸುವುದಿಲ್ಲ. ನೀವು ಅವರ ದಾಖಲೆಗಳನ್ನು ಆರಿಸಿ ನೋಡಿದರೆ ಏನೂ ಇಲ್ಲ.
ಡಿವಿಲಿಯರ್ಸ್ ತಮ್ಮ ವೈಯಕ್ತಿಕ ರನ್‌ಗಳ ಹೊರತಾಗಿ ಐಪಿಎಲ್‌ನಲ್ಲಿ ಏನನ್ನೂ ಸಾಧಿಸಿಲ್ಲ. ಅವರು ತಂಡದ ದೃಷ್ಟಿಕೋನದಿಂದ ಏನನ್ನೂ ಸಾಧಿಸಿದ್ದಾರೆ ಎಂದು ನಾನು ಮಾತನಾಡುವುದಿಲ್ಲ ಎಂದು ಗಂಭೀರ್ ಕಿಡಿಕಾರಿದ್ದಾರೆ.
ಕ್ರಿಕೆಟ್ ತಜ್ಞರು ಏನು ಹೇಳುತ್ತಿದ್ದಾರೆ ಎಂಬುದು ಮುಖ್ಯವಲ್ಲ, ಏನನ್ನಾದರೂ ಹೇಳುವುದು ಅವರ ಕೆಲಸ. ನೀವು ಯಾರೊಬ್ಬರ ನಾಯಕತ್ವವನ್ನು ಅವರ ತಂಡದ ಪ್ರದರ್ಶನದಿಂದ ನಿರ್ಣಯಿಸುತ್ತೀರಿ ಎಂಬುದು ನನ್ನ ಅಭಿಪ್ರಾಯವಾಗಿದೆ.
ಈ ವರ್ಷ ಮುಂಬೈ ಉತ್ತಮ ಪ್ರದರ್ಶನ ನೀಡಿದ್ದರೆ, ಎಲ್ಲಾ ತಜ್ಞರು ಹೊಗಳುತ್ತಿದ್ದರು. ಇಂದು ಮುಂಬೈ ಉತ್ತಮ ಪ್ರದರ್ಶನ ನೀಡಿಲ್ಲ. ಅದಕ್ಕಾಗಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಬೇರೆ ಫ್ರಾಂಚೈಸಿಯಿಂದ ಮುಂಬೈಗೆ ಬಂದದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಆದ್ದರಿಂದ ಸಮಯ ತೆಗೆದುಕೊಳ್ಳುತ್ತದೆ. ಹಾರ್ದಿಕ್ ಪಾಂಡ್ಯ ಅವರಿಗೆ ಸ್ವಲ್ಪ ಸಮಯ ನೀಡಿ.
ಕಳೆದ ಎರಡು ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಒಂದು ಬಾರಿ ಚಾಂಪಿಯನ್ ಮತ್ತು ರನ್ನರ್ ಆಪ್ ಮಾಡಿದ ಪಾಂಡ್ಯ ಅವರು ಮುಂಬೈಗೆ ಬಂದ ನಂತರ ಇಲ್ಲಿಯೂ ಚಾಂಪಿಯನ್ ಮಾಡುತ್ತಾರೆ ಎಂದು ನೀವು ನಿರೀಕ್ಷಿಸಿದ್ದೀರಿ. ಅವರು ತಂಡವನ್ನು ಇನ್ನೂ ಉತ್ತಮವಾಗಿ ಮುನ್ನೆಡೆಸಬಹುದಿತ್ತು. ಆದರೆ ಹಾರ್ದಿಕ್ ಅವರಿಂದ ಸಾಧ್ಯವಾಗದಿರುವುದಿಂದ ಸ್ವಲ್ಪ ಸಮಯ ನೀಡಿ ಗಂಭೀರ್ ತಿಳಿಸಿದ್ದಾರೆ