ಟೀಮ್ ಇಂಡಿಯಾದ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ. ಇದೇ ಸಮಯವನ್ನು ಬಳಸಿಕೊಳ್ಳಲು ಆಯ್ಕೆದಾರರು ಸಹ ಆಟಗಾರರಿಗೆ ಕಿವಿ ಮಾತು ನೀಡಿದ್ದಾರೆ. ಅದರಂತೆ ಆಟಗಾರರಿಗೆ ಮ್ಯಾಚ್ ಪ್ರ್ಯಾಕ್ಟಿಸ್ ಮಿಸ್ ಆಗಬಾರದು ಎಂದು ದೇಶೀಯ ಟೂರ್ನಿಯಲ್ಲಿ ಆಡುವಂತೆ ಸೂಚಿಸಿದ್ದಾರೆ. ಇವರ ಸೂಚನೆಗೆ ಹಲವು ಆಟಗಾರರು ಸೈ ಎಂದಿದ್ದು, ಇನ್ನು ಹಲವರು ವಿಶ್ರಾಂತಿಯ ಮೊರೆ ಹೋಗಿದ್ದಾರೆ.
ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ದುಲೀಪ್ ಟ್ರೋಫಿಯಲ್ಲಿ ಆಡುತ್ತಿಲ್ಲ. ಉಳಿದಂತೆ ಟೀಮ್ ಇಂಡಿಯಾದ ಎಲ್ಲ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ. ಹಿರಿಯ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡದೇ ಇರುವುದಕ್ಕೆ ಸುನಿಲ್ ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.

ದುಲೀಪ್ ಟ್ರೋಫಿ ಸೆಪ್ಟಂಬರ್ 5ರಿಂದ ಪ್ರಾರಂಭವಾಗಿ, ಸೆಪ್ಟಂಬರ್ 22ರ ವರೆಗೆ ನಡೆಯಲಿದೆ. ಹಿರಿಯ ಆಟಗಾರರು ದುಲಿಪ್ ಟ್ರೋಫಿ ಮಿಸ್ ಮಾಡಿಕೊಂಡಿದ್ದಕ್ಕೆ ಸುನಿಲ್ ಗವಾಸ್ಕರ್ ಕೆಂಡ ಕಾರಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ದುಲೀಪ್ ಟ್ರೋಫಿಯಲ್ಲಿ ಏಕೆ ಆಡಬಾರದು ಎಂದು ಸುನೀಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಹಿರಿಯ ಆಟಗಾರರನ್ನು ಆಯ್ಕೆ ಮಾಡಲಿಲ್ಲ. ಆದರೆ ಈ ಆಟಗಾರರು ತವರಿನಲ್ಲಿ ನಡೆಯುವ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮೈದಾನಕ್ಕೆ ಇಳಿಯುವುದು ಬಹುತೇಕ ಖಚಿತ. ಈ ಟೆಸ್ಟ್ ಸರಣಿಯ ಸಿದ್ಧತೆಗೆ ಉತ್ತಮ ಅವಕಾಶ ಸಿಕ್ಕಿತ್ತು. ಇದನ್ನು ಆಟಗಾರರು ಕೈ ಚೆಲ್ಲಿದ್ದಾರೆ. ಈ ಇಬ್ಬರಿಗೂ ಅಭ್ಯಾಸದ ಕೊರತೆ ಕಾಡಲಿದೆ ಎಂದು ತಿಳಿಸಿದ್ದಾರೆ.

ಭಾರತದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ದುಲೀಪ್ ಟ್ರೋಫಿಯಲ್ಲಿ ಆಡದಿರುವ ಕ್ರಮ ಸೂಕ್ತವಾಗಿದೆ. ವೇಗದ ಬೌಲರ್‌ಗೆ ಮುಂದೆ ಸಾಲು ಸಾಲು ಟೆಸ್ಟ್ ಸರಣಿಗಳು ಇವೆ. ಅಲ್ಲದೆ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಕ್ರೀಡಾಪಟುವಿಗೆ 35 ವರ್ಷದ ಮೇಲಾದರೆ ಆತ ನಿಯಮಿತವಾಗಿ ಆಡುವ ಮೂಲಕ ತನ್ನ ಫಿಟ್ನೆಸ್ ಸರಿಯಾಗಿ ಇಟ್ಟುಕೊಳ್ಳಲು ಸಹಾಯಕ. ಒಂದು ವೇಳೆ ನೀವು ಕೆಲ ಕಾಲ ಮೈದಾನದಿಂದ ದೂರ ಉಳಿದರೆ, ನಿಮ್ಮ ಫಿಟ್ನೆಸ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವೆ 2 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಿಂದ ನಡೆಯಲಿದೆ. ಉಭಯ ತಂಡಗಳು ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ. ಎರಡನೇ ಟೆಸ್ಟ್ ಸೆಪ್ಟಂಬರ್ 27 ರಿಂದ ಕಾನ್ಪುರ್‌ದಲ್ಲಿ ನಡೆಯಲಿದೆ. ಇದಾದ ಬಳಿಕ ಭಾರತದ ವಿರುದ್ಧ ಪ್ರವಾಸಿ ತಂಡ ಮೂರು ಪಂದ್ಯಗಳ ಟಿ20 ಪಂದ್ಯಗಳನ್ನು ಆಡಲಿದೆ.