ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಇಂಗ್ಲೆಂಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಸಿಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ವಿರಾಟ್ ಕೊಹ್ಲಿ ನಿವೃತ್ತಿಯ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಶುಭಮನ್ ಗಿಲ್ ಈ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ಮೇಲೆ ದಾಖಲೆಗಳನ್ನು ನಿರ್ಮಿಸಿರುವ ಗಿಲ್, ಮೂರನೇ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳತ್ತ ಚಿತ್ತ ನೆಟ್ಟಿದ್ದಾರೆ.
ಟೀಮ್ ಇಂಡಿಯಾದ ನೂತನ ನಾಯಕ ಶುಭಮನ್ ಗಿಲ್ ಇದಕ್ಕೂ ಮೊದಲು ಒಂದೇ ಒಂದು ಶತಕವನ್ನು ಸೇನಾ ರಾಷ್ಟ್ರಗಳಲ್ಲಿ ಬಾರಿಸಿರಲಿಲ್ಲ. ಆದರೆ ಈ ಸರಣಿಯಲ್ಲಿ ಈಗಾಗಲೇ ಮೂರು ಸೆಂಚುರಿ ಬಾರಿಸಿರುವ ಶುಭಮನ್ ಗಿಲ್ ಅಬ್ಬರಿಸಿದ್ದಾರೆ. ಇದೇ ಅಬ್ಬರ ಲಾರ್ಡ್ಸ್ ಅಂಗಳದಲ್ಲಿ ನಡೆಸಿದ್ದೇ ಆದಲ್ಲಿ ಗಿಲ್ ಹಲವು ದಾಖಲೆಗಳನ್ನು ಬರೆಯಬಹುದು.

ಒಂದೇ ಸರಣಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಶುಭಮನ್ ಗಿಲ್ ನಿರ್ಮಿಸಬಹುದು. ಒಂದೇ ಸರಣಿಯಲ್ಲಿ ಬ್ಯಾಟರ್ ಆಗಿ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಕ್ಲೈಡ್ ವಾಲ್ಕಾಟ್ ಅವರ ಹೆಸರಿನಲ್ಲಿದೆ. ಇವರು ಒಂದೇ ಸರಣಿಯಲ್ಲಿ 5 ಶತಕ ಸಿಡಿಸಿದ ಹಿರಿಮೆ ಹೊಂದಿದ್ದಾರೆ. ಈ ದಾಖಲೆ ಅಳಿಸಲು ಗಿಲ್‌ಗೆ ಇನ್ನು ಮೂರು ಶತಕಗಳ ಅವಶ್ಯಕತೆ ಇದೆ. ಇನ್ನು ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಒಂದೇ ಸರಣಿಯಲ್ಲಿ ಬಾರಿಸಿದ ಹಿರಿಮೆ ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಇವರು ನಾಯಕರಾಗಿ ಒಂದು ಸರಣಿಯಲ್ಲಿ 4 ಶತಕ ಸಿಡಿಸಿದ್ದಾರೆ.
ಗಿಲ್ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ 390 ರನ್‌ಗಳನ್ನು ಕಲೆ ಹಾಕಿದಲ್ಲಿ, ಬ್ರಾಡ್ಮನ್ ಅವರ ಮತ್ತೊಂದು ದಾಖಲೆ ಧ್ವಂಸವಾಗುತ್ತದೆ. ಸುಮಾರು 95 ವರ್ಷಗಳಿಂದ ಈ ದಾಖಲೆಯನ್ನು ಯಾವೊಬ್ಬ ಬ್ಯಾಟರ್ ಅಳಿಸಿರಲಿಲ್ಲ. ಬ್ರಾಡ್ಮನ್ 1930ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 974 ರನ್ ಸಿಡಿಸಿ ಅಬ್ಬರಿಸಿದ್ದರು. ಇನ್ನು ಗಿಲ್, ಬ್ರಾಡ್ಮನ್ ಅವರ ಮತ್ತೊಂದು ದಾಖಲೆ ಅಳಿಸಿ ಹಾಕುವ ಅವಕಾಶ ಇದೆ. ನಾಯಕನಾಗಿ ವೇಗವಾಗಿ 1 ಸಾವಿರ ರನ್ ಕಲೆ ಹಾಕಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಡಾನ್ ಬ್ರಾಡ್ಮನ್ ಈ ಸಾಧನೆ ಮಾಡಲು 11 ಇನಿಂಗ್ಸ್ ತೆಗೆದುಕೊಂಡಿದ್ದರು. ಗಿಲ್ ಈಗಾಗಲೇ 4 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದು 585 ರನ್ ಸಿಡಿಸಿದ್ದಾರೆ. ಇವರು ತಮ್ಮ ಅಮೋಘ ಫಾರ್ಮ್ ಇದೇ ರೀತಿ ಮುಂದುವರೆಸಿದಲ್ಲಿ ಈ ದಾಖಲೆಗಳನ್ನು ಮುರಿಯಬಲ್ಲರು.

ಇನ್ನು ಒಂದೇ ಸರಣಿಯಲ್ಲಿ ಯಾವೊಬ್ಬ ಒಂದು ಸಾವಿರ ರನ್‌ಗಳ ಮಾರ್ಕ್ ದಾಟಿಲ್ಲ. ಹೀಗಾಗಿ ಈ ರನ್ ಮಹಲ್ ಕಟ್ಟಿ ವಿಶ್ವ ದಾಖಲೆ ನಿರ್ಮಿಸುವ ಕನಸಿನಲ್ಲಿ ಗಿಲ್ ಇದ್ದಾರೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಹೇಗೆ ಬ್ಯಾಟ್ ಮಾಡುತ್ತಾರೆ ಎಂಬುದಕ್ಕೆ ಇನ್ನೇನು ಉತ್ತರ ಸಿಗಲಿದೆ.