ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನಶನಿವಾರ ಪ್ರಕಟಿಸಲಾಗಿದೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರಿಂದ ತೆರವಾದ ನಾಯಕ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗಳು ಉದ್ಭವಿಸಿತ್ತು. ಕೊನೆಗೂ ಈ ಸ್ಥಾನವನ್ನು ಶುಭಮನ್ ಗಿಲ್ ತುಂಬಿದ್ದಾರೆ. ಈ ರೇಸ್‌ನಲ್ಲಿದ್ದ ಕೆಎಲ್ ರಾಹುಲ್, ರಿಷಭ್ ಪಂತ್, ಜಸ್ಪ್ರಿತ್ ಬುಮ್ರಾ ಅವರನ್ನು ಹಿಂದಿಕ್ಕಿದ ಗಿಲ್ ಪಟ್ಟಕ್ಕೇರಿದ್ದಾರೆ. ಗಿಲ್ ಸೇನೆಯಲ್ಲಿ ಕನ್ನಡಿಗರಿಗೂ ಅವಕಾಶ ಸಿಕ್ಕಿದೆ.
ಟೀಮ್ ಇಂಡಿಯಾದಲ್ಲಿ ಯಾರೆಲ್ಲಾ ಆಟಗಾರರು ಸ್ಥಾನ ಪಡೆಯಬಹುದು ಎಂಬ ಪ್ರಶ್ನೆ ಈ ಮೊದಲು ಉದ್ಭವಿಸಿತ್ತು. ಇದಕ್ಕೆ ಶನಿವಾರ ಉತ್ತರ ಸಿಕ್ಕಿದೆ. ಅಲ್ಲದೆ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸಾಯಿ ಸುದರ್ಶನ್, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಹಲವು ಸರಣಿಗಳಲ್ಲಿ ಭಾರತ ತಂಡದ ಉಪನಾಯಕರಾಗಿ ಸೇವೆ ಸಲ್ಲಿಸಿದ್ದ ರಿಷಭ್ ಪಂತ್ ಮತ್ತೆ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬಿಸಿಸಿಐ ಪ್ರಕಟಿಸಿದ 18 ಜನರ ತಂಡದಲ್ಲಿ ಮೂವರು ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದಾರೆ.

ಐಪಿಎಲ್‌ನಲ್ಲಿ ಹಾಗೂ ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಆಟಗಾರರಿಗೆ ಬಿಸಿಸಿಐ ಮಣೆ ಹಾಕಿದೆ. ಬಹು ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಬೇಕು ಎಂದು ಕನಸು ಕಂಡಿದ್ದ ಕರುಣ್ ನಾಯರ್ ಸಹ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.
2016ರಲ್ಲಿ ಭಾರತಕ್ಕೆ ಇಂಗ್ಲೆಂಡ್ ಪ್ರವಾಸ ಬೆಳೆಸಿದ್ದಾಗ ತಂಡದಲ್ಲಿ ಸ್ಥಾನ ಪಡೆದು, ತ್ರಿಬಲ್ ಸೆಂಚುರಿ ಬಾರಿಸಿದ್ದ ಕರುಣ್ ನಾಯರ್ ಮತ್ತೆ ತಂಡಕ್ಕೆ ವಾಪಸ್ ಆಗಿದ್ದಾರೆ. ಕರುಣ್ ನಾಯರ್ ಎಂಟು ವರ್ಷಗಳ ಬಳಿಕ ಮತ್ತೆ ಟೀಮ್ ಇಂಡಿಯಾಕ್ಕೆ ಎಂಟ್ರಿ ಆಗಿದ್ದಾರೆ. ಈಗಾಗಲೇ ಭಾರತ "ಎ" ತಂಡದಲ್ಲಿ ಸ್ಥಾನ ಪಡೆದಿರುವ ಕರುಣ್ ನಾಯರ್, ಕೌಂಟಿಯಲ್ಲಿ ರನ್ ಗಳಿಸಿದ್ದರಿಂದ ತಂಡದಲ್ಲಿ ಲಭಿಸಿದೆ. ಇವರು ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದಾಗಿದೆ. ಆದರೆ ಕರುಣ್ ನಾಯರ್ ಈಗ ಕರ್ನಾಟಕದ ಪರ ರಣಜಿ ಆಡುತ್ತಿಲ್ಲ. ಬದಲಿಗೆ ಕರುಣ್ ವಿದರ್ಭ ತಂಡದ ಪರ ಆಡುತ್ತಿದ್ದಾರೆ.
ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ರಾಹುಲ್ ತಂಡದಲ್ಲಿರುವ ಅನುಭವಿ ಬ್ಯಾಟರ್‌ಗಳಲ್ಲಿ ಇವರಿಗೆ ಅಗ್ರ ಸ್ಥಾನ. ಇವರು ಆರಂಭಿಕರಾಗಿ ಬ್ಯಾಟ್ ಮಾಡಬಲ್ಲ ಆಟಗಾರ. ಇವರು ಮಧ್ಯಮ ಕ್ರಮಾಂಕದಲ್ಲೂ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್.
ಟೆಸ್ಟ್ ತಂಡದಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣಾ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇವರು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಪರ್ಪಲ್ ಕ್ಯಾಪ್ ಪಡೆದು ಭರವಸೆ ಮೂಡಿಸಿದ್ದಾರೆ. ಇವರು ಈ ಬಾರಿ ಅತಿ ಹೆಚ್ಚು ಡಾಟ್ ಬೌಲ್‌ಗಳನ್ನು ಎಸೆದ ಆಟಗಾರರಲ್ಲಿ ಒಬ್ಬರು. ಹೀಗಾಗಿ ಇವರ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ವಿಶ್ವಾಸ ಮೂಡಿಸಿದೆ.