
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಭಾರೀ ಮಳೆ ಸುರಿದಿದೆ. ಹೀಗಾಗಿ ಶುಕ್ರವಾರ ಟಿ20 ವಿಶ್ವಕಪ್‌ನಲ್ಲಿ ಆಯೋಜನೆಯಾಗಬೇಕಿದ್ದ ಎರಡು ಪಂದ್ಯಗಳು ಕೂಡ ಒಂದೂ ಎಸೆತ ಕಾಣದೆ ರದ್ದಾಗಿದೆ. ಮೊದಲಿಗೆ ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಮುಖಾಮುಖಿ ಎಂಸಿಜಿಯಲ್ಲಿ ನಡೆಯಬೇಕಲಾಗಿತ್ತು. ಭಾರೀ ಮಳೆಯ ಕಾರಣದಿಂದಾಗಿ ಈ ಪಂದ್ಯ ರದ್ದಾದ ಬಳಿಕ ಸಾಕಷ್ಟು ಕುತೂಹಲ ಮೂಡಿಸಿದ್ದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಕದನ ಕೂಡ ಮಳೆಗೆ ಆಹುತಿಯಾಯಿತು.
ಇಂದು ಎಂಸಿಜಿಯಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧದ ಕದನ ಎರಡು ತಂಡಗಳ ಪಾಲಿಗೂ ಅತ್ಯಂತ ಮಹತ್ವದ್ದಾಗಿತ್ತು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಇದಕ್ಕೂ ಹಿಂದಿನ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಒಂದು ಸೋಲು ಅನುಭವಿಸಿದ್ದ ಕಾರಣ ಈ ಪಂದ್ಯದಲ್ಲಿ ಗೆಲ್ಲುವ ತಂಡ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿತ್ತು. ಆದರೆ ಮಳೆ ಎಲ್ಲಾ ಲೆಕ್ಕಾಚಾರಗಳನ್ನು ಕೂಡ ಉಲ್ಟಾ ಮಾಡಿದೆ.
ಆದರೆ ಮಳೆಯಿಂದಾಗಿ ಈ ಪಂದ್ಯ ರದ್ದಾಗಿದ್ದರು ಕೂಡ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ. ಈ ಕುತೂಹಲಕಾರಿ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಗಳ ಪೈಕಿ ಕೆಲವರಿಗೆ ಆಟೋಗ್ರಾಫ್‌ಗೆ ಸಹಿ ಹಾಕುವ ಮೂಲಕ ಖುಷಿಪಡಿಸಿದ್ದಾರೆ. ಈ ಬಗ್ಗೆ ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ.
ಸೂಪರ್ 12 ಹಂತದ ಮೊದಲ ಗುಂಪಿನಲ್ಲಿನ ಎರಡು ಬಲಿಷ್ಠ ತಂಡಗಳು ಎನಿಸಿಕೊಂಡಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಆರಂಭ ಹೇಳಿಕೊಳ್ಳುವಂತಿರಲಿಲ್ಲ. ಈ ಸಂದರ್ಭದಲ್ಲಿ ಈ ಎರಡು ತಂಡಗಳೂ ಪರಸ್ಪರ ಮುಖಾಮುಖಿಯಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಯಾವ ತಂಡಕ್ಕೆ ಮೇಲುಗೈ ದೊರೆಯಲಿದೆ ಎಂಬುದು ಈಗ ಅಭಿಮಾನಿಗಳ ಕುತೂಹಲ ಕೆರಳುವಂತೆ ಮಾಡಿತ್ತು. ಆದರೆ ಮಳೆ ಅಭಿಮಾನಿಗಳ ಕಾತರಕ್ಕೆ ತಣ್ಣೀರೆರಚಿದೆ.
ನವಾಜ್ ಹಾಕಿದ ಚೆಂಡು ತಿರುಗಿ ಪ್ಯಾಡ್‌ಗೆ ಬಡಿದಿದ್ದರೆ ಏನಾಗುತ್ತಿತ್ತು?: ನಿವೃತ್ತಿಯ ಉತ್ತರ ಕೊಟ್ಟ ಅಶ್ವಿನ್!
ಆಸ್ಟ್ರೇಲಿಯಾ ಸಂಪೂರ್ಣ ಸ್ಕ್ವಾಡ್: ಆರೋನ್ ಫಿಂಚ್ (ನಾಯಕ), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಪ್ಯಾಟ್ ಕಮ್ಮಿನ್ಸ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಕೇನ್ ರಿಚರ್ಡ್‌ಸನ್, ಆಡಮ್ ಝಂಪಾ, ಕ್ಯಾಮರೂನ್ ಗ್ರೀನ್, ಸ್ಟೀವನ್ ಸ್ಮಿತ್
ಇಂಗ್ಲೆಂಡ್ ಸಂಪೂರ್ಣ ಸ್ಕ್ವಾಡ್: ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ಫಿಲಿಪ್ ಸಾಲ್ಟ್, ಟೈಮಲ್ ಮಿಲ್ಸ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್