2023ರ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಕೊನೆಯವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಮತ್ತು ಇದು ಅವರ ಅತ್ಯುತ್ತಮ ಕಲಿಕೆಯ ಅನುಭವವಾಗಿದೆ ಎಂದರು.
2021ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಭಾಗವಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಂಡ ಅನುಭವದ ಕುರಿತು ಮಾತನಾಡಿದರು.

ಮ್ಯಾಕ್ಸ್‌ವೆಲ್ 'ಇನ್ನು ಮುಂದೆ ತನಗೆ ನಡೆಯಲು ಸಾಧ್ಯವಿಲ್ಲ' ಎನ್ನುವ ತನಕ ಕ್ರಿಕೆಟ್ ಆಡಲು ಉದ್ದೇಶಿಸಿರುವುದನ್ನು ಒತ್ತಿ ಹೇಳಿದರು. ಮುಂಬರುವ ಬಿಗ್ ಬ್ಯಾಷ್ ಲೀಗ್ ಋತುವಿಗಾಗಿ ಮೆಲ್ಬೋರ್ನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ವೃತ್ತಿಜೀವನದ ಮೇಲೆ ಐಪಿಎಲ್ ಪ್ರಭಾವದ ಕುರಿತು ಪ್ರತಿಕ್ರಿಯಿಸಿದರು.
ಬಿಗ್ ಬ್ಯಾಷ್ ಲೀಗ್ 13ರ ಆರಂಭಿಕ ಪಂದ್ಯದಲ್ಲಿ ಬ್ರಿಸ್ಬೇನ್‌ನಲ್ಲಿ ಬ್ರಿಸ್ಬೇನ್ ಹೀಟ್ ತಂಡದ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ 2012ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಲೀಗ್‌ನಲ್ಲಿ ಬೇಡಿಕೆಯ ಆಟಗಾರರಾಗಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಉಪಯುಕ್ತ ಆಫ್ ಸ್ಪಿನ್ ಬೌಲಿಂಗ್‌ನೊಂದಿಗೆ ಪಂದ್ಯದ ಗತಿ ಬದಲಿಸಬಲ್ಲ ಸಾಮರ್ಥ್ಯಕ್ಕೆ ಖ್ಯಾತರಾಗಿದ್ದಾರೆ.

ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಪಂದ್ಯಾವಳಿಯಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ಏಕೆಂದರೆ ಡೆಲ್ಲಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳೊಂದಿಗೆ ಅವರ ಅವಧಿ ಯಶಸ್ವಿಯಾಗಲಿಲ್ಲ.
ಆದರೆ, 2014ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿ ಮಿಂಚಿದರು. ಆದರೆ ಆರ್‌ಸಿಬಿ ತಂಡದಲ್ಲಿ ಸ್ಫೋಟಕ ಬ್ಯಾಟರ್-ಸ್ಪಿನ್ನರ್ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ತನ್ನ ನಿಜವಾದ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.
"ಐಪಿಎಲ್, ಬಹುಶಃ ನಾನು ಆಡುವ ಕೊನೆಯ ಪಂದ್ಯಾವಳಿಯಾಗಿರಬಹುದು. ಏಕೆಂದರೆ ನಾನು ಇನ್ಮುಂದೆ ನಡೆಯಲು ಸಾಧ್ಯವಾಗದವರೆಗೆ ಐಪಿಎಲ್ ಆಡುತ್ತೇನೆ. ನನ್ನ ವೃತ್ತಿಜೀವನದುದ್ದಕ್ಕೂ ಐಪಿಎಲ್ ನನಗೆ ಎಷ್ಟು ಒಳ್ಳೆಯದು ಎಂದು ನಾನು ಮಾತನಾಡಿದ್ದೇನೆ''.
"ನಾನು ಭೇಟಿಯಾದ ಜನರು, ನಾನು ಪಡೆದ ಕೋಚ್‌ಗಳು, ಹೆಗಲ ಮೇಲೆ ಕೈಹಾಕುವ ಸಹ ಅಂತಾರಾಷ್ಟ್ರೀಯ ಆಟಗಾರರು ಹೀಗೆ, ಆ ಪಂದ್ಯಾವಳಿ ನನ್ನ ಇಡೀ ವೃತ್ತಿಜೀವನಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ," ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದರು.

ಆರ್‌ಸಿಬಿ ಫ್ರಾಂಚೈಸಿ ಜೊತೆಗಿನ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರಯಾಣವು 2021ರ ಋತುವಿನಲ್ಲಿ 14.25 ಕೋಟಿ ರೂಪಾಯಿಗಳಿಗೆ ತೀವ್ರ ಬಿಡ್ಡಿಂಗ್ ಯುದ್ಧದ ನಂತರ ಅವರನ್ನು ಖರೀದಿಸಿದಾಗಿನಿಂದ ಪ್ರಾರಂಭವಾಯಿತು.
ಆರ್‌ಸಿಬಿ ತಂಡಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಆಗಮನವು ಅವರ ಐಪಿಎಲ್ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಗುರುತಿಸಿ ಮತ್ತು ಶೀಘ್ರವಾಗಿ ತಂಡದ ಪ್ರಮುಖ ಸದಸ್ಯರಾದರು. 2021ರ ಐಪಿಎಲ್ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ 15 ಪಂದ್ಯಗಳಲ್ಲಿ 144.10ರ ಸ್ಟ್ರೈಕ್ ರೇಟ್‌ನಲ್ಲಿ ಪ್ರಭಾವಶಾಲಿ 513 ರನ್ ಗಳಿಸಿದರು.
2022ರ ಋತುವಿನಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದರು. 2022ರ ಐಪಿಎಲ್‌ಗೆ ಮುಂಚಿತವಾಗಿ ಆರ್‌ಸಿಬಿ ಉಳಿಸಿಕೊಂಡ ಮೂವರು ಆಟಗಾರರಲ್ಲಿ ಒಬ್ಬರಾಗಿದ್ದರು.
11 ಕೋಟಿ ರೂಪಾಯಿ ದೊಡ್ಡ ಮೊತ್ತಕ್ಕೆ ಮ್ಯಾಕ್ಸ್‌ವೆಲ್ ಅವರನ್ನು ಉಳಿಸಿಕೊಂಡಿರುವುದು ಆರ್‌ಸಿಬಿ ತಂಡಕ್ಕೆ ತಂದ ಅಪಾರ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಆರ್‌ಸಿಬಿಯೊಂದಿಗಿನ ಅವರ ಸಮಯದುದ್ದಕ್ಕೂ, ಮಧ್ಯಮ ಕ್ರಮಾಂಕವನ್ನು ಬಲಪಡಿಸುವಲ್ಲಿ ಮ್ಯಾಕ್ಸ್‌ವೆಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನಿಂಗ್ಸ್‌ನ ಅಂತ್ಯದ ವೇಳೆಗೆ ರನ್ ರೇಟ್ ವೇಗಗೊಳಿಸಬಲ್ಲ ಫಿನಿಶರ್ ಪಾತ್ರವನ್ನು ವಹಿಸಿಕೊಂಡಿದ್ದಾರೆ.
2023ರ ಋತುವಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ 14 ಪಂದ್ಯಗಳಲ್ಲಿ ಮೂರು ಅರ್ಧಶತಕಗಳನ್ನು ಒಳಗೊಂಡಂತೆ 400 ರನ್‌ಗಳನ್ನು ಗಳಿಸಿದರು. ಆಸ್ಟ್ರೇಲಿಯಾದ 2023ಎ ವಿಶ್ವಕಪ್ ವಿಜೇತ ಅಭಿಯಾನದಲ್ಲಿ ಆಲ್‌ರೌಂಡರ್ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದು, 2024ರ ಐಪಿಎಲ್‌ನಲ್ಲಿ ಉಳಿಸಿಕೊಂಡರೆ ಆಶ್ಚರ್ಯವೇನಿಲ್ಲ.
ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಅತ್ಯುತ್ತಮ ಪ್ರದರ್ಶನದಲ್ಲಿ ತಮ್ಮ ಚೊಚ್ಚಲ ದ್ವಿಶತಕ ಬಾರಿಸಿದರು ಮತ್ತು ಆಸ್ಟ್ರೇಲಿಯಾಕ್ಕೆ ಹಿಂತಿರುಗುವ ಮೊದಲು ಟಿ20 ಸರಣಿಯಲ್ಲಿ ಭಾರತದ ವಿರುದ್ಧ ಪಂದ್ಯ ವಿಜೇತ ಶತಕದೊಂದಿಗೆ ಮುಗಿಸಿದರು.