
ಟೊರಾಂಟೊ, ಜುಲೈ 28: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತ 2011ರ ವಿಶ್ವಕಪ್ ಹೀರೊ ಯುವರಾಜ್ ಸಿಂಗ್, ಇದೀಗ ಗ್ಲೋಬಲ್ ಟಿ20 ಕೆನಡಾ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದು, ಟೊರಾಂಟೊ ನ್ಯಾಷನಲ್ಸ್ ಪರ 21 ಎಸೆತಗಳಲ್ಲಿ 35 ರನ್ ಚೆಚ್ಚಿದ್ದಾರೆ.
ತಮ್ಮೊಳಗಿನ ಕ್ರಿಕೆಟ್ ಕಲೆ ಇನ್ನೂ ಬರಿದಾಗಿಲ್ಲ ಎಂಬುದನ್ನು ಸಾಬೀತು ಪಡಿಸಿದ ಟೊರಾಂಟೊ ನ್ಯಾಷನಲ್ಸ್ ತಂಡದ ನಾಯಕ ಯುವಿ, ತಲಾ ಮೂರು ಸಿಕ್ಸರ್ ಮತ್ತು ಫೋರ್‌ಗಳನ್ನು ಒಳಗೊಂಡ ಸ್ಫೋಟಕ ಇನಿಂಗ್ಸ್ ಮೂಲಕ ಎಡ್ಮಂಟನ್ ರಾಯಲ್ಸ್ ವಿರುದ್ಧ ತಮ್ಮ ತಂಡಕ್ಕೆ 2 ವಿಕೆಟ್ ರೋಚಕ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಡ್ಮಂಟನ್ ನ್ಯಾಷನಲ್ಸ್ ತಂಡ 19 ಓವರ್‌ಗಳಲ್ಲಿ 6 ವಿಕೆಟ್‌ಗೆ 191 ರನ್‌ಗಳ ಬೃಹತ್ ಮೊತ್ತವನ್ನೇ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಟೊರಾಂಟೊ ನ್ಯಾಷನಲ್ಸ್ ತಂಡ ಹೆನ್ರಿಚ್ ಕ್ಲಾಸನ್ (39 ಎಸೆತಗಳಲ್ಲಿ 45 ರನ್), ಯುವರಾಜ್ ಸಿಂಗ್ (35) ಮತ್ತು ಮನ್‌ಪ್ರೀತ್ ಸಿಂಗ್ ಗೂನಿ (12 ಎಸೆತಗಳಲ್ಲಿ 33 ರನ್ ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 17.5 ಓವರ್‌ಗಳಲ್ಲಿ 8 ವಿಕೆಟ್‌ಗೆ 192 ರನ್ ಚೆಚ್ಚಿ ಗೆಲುವಿನ ಕೇಕೆ ಹಾಕಿತು.
ಇನ್ನು ಗ್ಲೋಬಲ್ ಟಿ20 ಟೂರ್ನಿಯ ಮೊದಲ ಒಂದ್ಯದಲ್ಲಿ ವ್ಯಾಂಕೂವರ್ ನೈಟ್ಸ್ ವಿರುದ್ಧ ಔಟ್ ಆಗದಿದ್ದರೂ ಪೆವಿಲಿಯನ್‌ಗೆ ತೆರಳಿ ಸುದ್ದಿಯಾಗಿದ್ದ ಯುವಿ, ಎರಡನೇ ಪಂದ್ಯದಲ್ಲಿ ತಮ್ಮ ಸ್ಫೋಟಕ ಹೊಡೆತಗಳ ಮೂಲಕ ಮಿಂಚಿದರು. ಅದರಲ್ಲೂ ಪಾಕಿಸ್ತಾನದ ಸ್ಪಿನ್ನರ್ ಶದಾಬ್ ಖಾನ್ ಅವರ ಬೌಲಿಂಗ್‌ನಲ್ಲಿ ಫ್ಲ್ಯಾಟ್ ಸಿಕ್ಸರ್ ಬಾರಿಸುವ ಮೂಲಕ ಪ್ರೇಕ್ಷಕರಿಗೆ ರೋಮಾಂಚಕಾರಿ ಅನುಭವ ನೀಡಿದ್ದರು.
ಅಲ್ಲದೆ 3ನೇ ವಿಕೆಟ್‌ಗೆ ಎನ್ರಿಚ್ ಕ್ಲಾಸನ್ ಜೊತೆಗೂಡಿ 56 ರನ್‌ಗಳ ಅತ್ಯುತ್ತಮ ಜೊತೆಯಾಟವನ್ನೂ ಆಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಬೆನ್ ಕಟಿಂಗ್ ಅವರ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಯುವಿ ಹೊರನಡೆದರು.
ಯುವರಾಜ್ ಔಟ್ ಆದ ಸಂದರ್ಭದಲ್ಲಿ ಟೊರಾಂಟೊ ತಂಡಕ್ಕೆ ಇನ್ನೂ 100 ರನ್‌ಗಳನ್ನು ಗಳಿಸುವ ಅಗತ್ಯವಿತ್ತು. ಇನಿಂಗ್ಸ್ ಅಂತ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಮನ್‌ಪ್ರೀತ್ ಸಿಂಗ್ ಗೂನಿ ಕೇವಲ 13 ಎಸೆತಗಳಲ್ಲಿ ತಲಾ ಮೂರು ಸಿಕ್ಸರ್ ಮತ್ತು ಫೋರ್‌ಗಳೊಂದಿಗೆ ತಂಡದ ಜಯದ ಹಾದಿಯನ್ನು ಸುಗಮವನ್ನಾಗಿಸಿದರು.
"ಇದೊಂದು ಅದ್ಭುತ ಪ್ರದರ್ಶನ. ಪಂದ್ಯದಲ್ಲಿ ಸೋತೆವು ಎಂದೆನಿಸಿತ್ತು. ಆದರೆ ಮನ್‌ಪ್ರೀತ್ ಗೂನಿ ಅವರಸ್ಫೋಟಕ ಬ್ಯಾಟಿಂಗ್, ಮತ್ತು ಮಾನ್ಫೋರ್ಟ್ ಮತ್ತು ಸಲ್ಮಾನ್ ನಝರ್ ಅವರ ಸಮಯೋಚಿತ ಆಟಗದ ಮೂಲಕ ಗೆದ್ದಿದ್ದೇವೆ," ಎಂದು ಪಂದ್ಯದ ಬಳಿಕ ಮಾತನಾಡಿದ ಯುವರಾಜ್ ಸಿಂಗ್ ತಮ್ಮ ಅಭಿಪ್ರಾಯ ಹಂಚಿಕೊಂಡರು.