ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ತಂಡಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಈ ಮೆಗಾ ಟೂರ್ನಿಯ ರೋಚಕತೆಯನ್ನು ಸವಿಯಲು ಕಾತರರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಆದಾಗ್ಯೂ, ಈ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಭಾರತ ತಂಡವು ದುಬೈನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಲಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ತಯಾರಾಗಿದೆ. ಇದಕ್ಕಾಗಿ 15 ಸದಸ್ಯರ ತಂಡವನ್ನು ಸಹ ಪ್ರಕಟಿಸಲಾಗಿದೆ. ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪ್ರದರ್ಶನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಮಿಂಚಿದರೆ ತಮ್ಮ ಹೆಸರಿನಲ್ಲಿ ವಿಶ್ವದಾಖಲೆ ಮಾಡುವ ಅವಕಾಶವನ್ನು ಹೊಂದಿದ್ದಾರೆ.

ಟೀಮ್ ಇಂಡಿಯಾದ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅವರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲುವ ಸುವರ್ಣಾವಕಾಶವಿದೆ. ಈ ವಿಶ್ವ ದಾಖಲೆ ಸೃಷ್ಟಿಸಲು ವಿರಾಟ್ ಕೊಹ್ಲಿ ಹತ್ತಿರದಲ್ಲಿದ್ದಾರೆ. ವಿರಾಟ್ ಕೊಹ್ಲಿ 2009, 2013 ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದಾರೆ. ಈ ಅವಧಿಯಲ್ಲಿ, ಅವರು ಒಟ್ಟು 13 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 12 ಇನ್ನಿಂಗ್ಸ್‌ಗಳಲ್ಲಿ 88.16 ಸರಾಸರಿ ಮತ್ತು 92.32 ಸ್ಟ್ರೈಕ್ ರೇಟ್‌ನಲ್ಲಿ 529 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಲು ವಿರಾಟ್ ಕೊಹ್ಲಿ ಕೇವಲ 263 ರನ್‌ಗಳ ಅಂತರದಲ್ಲಿದ್ದಾರೆ. ಅವರು 263 ರನ್ ಗಳಿಸುವ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಹೊಂದಿರುವ ಕ್ರಿಸ್ ಗೇಲ್ (791) ಅವರನ್ನು ಹಿಂದಿಕ್ಕಲಿದ್ದಾರೆ. ಭಾರತ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂದರೆ ಶಿಖರ್ ಧವನ್. ಈ ಮಾಜಿ ಬ್ಯಾಟರ್ 10 ಪಂದ್ಯಗಳಲ್ಲಿ ಮೂರು ಶತಕಗಳೊಂದಿಗೆ 701 ರನ್ ಗಳಿಸಿದ್ದಾರೆ.
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 791 ರನ್
ಮಹೇಲಾ ಜಯವರ್ಧನೆ (ಶ್ರೀಲಂಕಾ) - 742 ರನ್
ಶಿಖರ್ ಧವನ್ (ಭಾರತ) - 701 ರನ್
ಕುಮಾರ ಸಂಗಕ್ಕಾರ (ಶ್ರೀಲಂಕಾ) - 683 ರನ್
ಸೌರವ್ ಗಂಗೂಲಿ (ಭಾರತ) - 665 ರನ್
ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) - 653 ರನ್
ರಾಹುಲ್ ದ್ರಾವಿಡ್ (ಭಾರತ) - 627 ರನ್
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 593 ರನ್
ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್) - 587 ರನ್
ಜಯಸೂರ್ಯ (ಶ್ರೀಲಂಕಾ) - 536 ರನ್
ವಿರಾಟ್ ಕೊಹ್ಲಿ (ಭಾರತ) - 529* ರನ್
ಶಿಖರ್ ಧವನ್ - 701 ರನ್
ಸೌರವ್ ಗಂಗೂಲಿ - 665 ರನ್
ರಾಹುಲ್ ದ್ರಾವಿಡ್ - 627 ರನ್
ವಿರಾಟ್ ಕೊಹ್ಲಿ - 529* ರನ್
ರೋಹಿತ್ ಶರ್ಮಾ - 481* ರನ್
ಚಾಂಪಿಯನ್ಸ್ ಟ್ರೋಫಿಯಲ್ಲಿ ಫೆಬ್ರವರಿ 20 ರಿಂದ ಟೀಮ್ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ಎದುರಿಸಲಿದೆ. ಭಾರತ ತಂಡದ ಎರಡನೇ ಪಂದ್ಯವು ಟೂರ್ನಿಯ ಬ್ಲಾಕ್‌ಬಸ್ಟರ್ ಪಂದ್ಯವಾಗಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಈ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 23 ರಂದು ನಡೆಯಲಿದೆ. ಕೊನೆಯ ಗುಂಪಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾರ್ಚ್ 2 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.