ಐಪಿಎಲ್ 2025 ರ 19 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿವೆ. ಉಭಯ ತಂಡಗಳ ನಡುವಿನ ಈ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಗುಜರಾತ್ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕ ಶುಭಮನ್ ಗಿಲ್ ನಿರೀಕ್ಷೆಯಂತೆ ಗುಜರಾತ್ ಟೈಟಾನ್ಸ್ ಬೌಲರ್‍ಗಳು ಅದ್ಭುತ ಪ್ರದರ್ಶನ ನೀಡಿದರು. ಮೊಹಮ್ಮದ್ ಸಿರಾಜ್ ತಮ್ಮ ಅಮೋಘ ಬೌಲಿಂಗ್ ಪ್ರದರ್ಶನ ತೋರಿಸಿದರು.
ಗುಜರಾತ್ ಟೈಟಾನ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್ ರೈಸರ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ತಂಡಕ್ಕೆ 153 ರನ್ ಗಳ ಗುರಿ ಸಿಕ್ಕಿದೆ. ಸನ್‌ರೈಸರ್ಸ್ ಪರ ನಿತೀಶ್ ಕುಮಾರ್ ರೆಡ್ಡಿ ಅತಿ ಹೆಚ್ಚು 31 ರನ್ ಗಳಿಸಿದರು. ಹೆನ್ರಿಕ್ ಕ್ಲಾಸೆನ್ 27 ರನ್‌ಗಳ ಇನ್ನಿಂಗ್ಸ್ ಆಡಿದರು. ಗುಜರಾತ್ ಪರ ಮೊಹಮ್ಮದ್ ಸಿರಾಜ್ 4 ಓವರ್‌ಗಳಲ್ಲಿ 17 ರನ್‌ಗಳಿಗೆ 4 ವಿಕೆಟ್ ಕಬಳಿಸಿದರು.

ತವರಿನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹೈದರಾಬಾದ್ ತಂಡ 50 ರನ್‌ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ (18), ಟ್ರಾವಿಸ್ ಹೆಡ್ (8) ಮತ್ತು ಇಶಾನ್ ಕಿಶನ್ (17) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವ ಸಹಾಸ ಮಾಡಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಬಂದ ನಿತೀಶ್ ಕುಮಾರ್ ರೆಡ್ಡಿ ಸಂಕಷ್ಟದಲ್ಲಿದ್ದ ಹೈದರಾಬಾದ್ ತಂಡಕ್ಕೆ ಆಸರೆಯಾದರು.
ನಿತೀಶ್ ಕುಮಾರ್ ರೆಡ್ಡಿ 31 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಂತರ ಬಂದ ಹೆನ್ರಿಚ್ ಕ್ಲಾಸೆನ್ (27), ಅನಿಕೇತ್ ವರ್ಮಾ (18), ಕಮಿಂದು ಮೆಂಡಿಸ್ (1) ಮತ್ತು ಸಿಮರ್ಜೀತ್ ಸಿಂಗ್ (0) ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಸರೆಯಾಗಲಿಲ್ಲ. ಕೊನೆಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ಅಜೇಯ 22 ರನ್ ಗಳಿಸಿದರೆ, ಮೊಹಮ್ಮದ್ ಶಮಿ 6 ರನ್ ಗಳಿಸಿ ಅಜೇಯರಾಗುಳಿದರು.
ಗುಜರಾತ್ ಟೈಟಾನ್ಸ್ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ಕಂಡು ಬಂತು. ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದು ಮಿಂಚಿದರೆ, ಪ್ರಸಿದ್ಧ್ ಕೃಷ್ಣ ಮತ್ತು ರವಿಶ್ರೀನಿವಾಸನ್ ಸಾಯಿ ಕಿಶೋರ್ ತಲಾ 2 ವಿಕೆಟ್ ಕಬಳಿಸಿದರು.
ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ಪ್ಯಾಟ್ ಕಮಿನ್ಸ್ (ನಾಯಕ), ಜೀಶನ್ ಅನ್ಸಾರಿ, ಜಯದೇವ್ ಉನಾದ್ಕತ್, ಮೊಹಮ್ಮದ್ ಶಮಿ.
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ವಾಷಿಂಗ್ಟನ್ ಸುಂದರ್, ಆರ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ.